ಕೊಯಮತ್ತೂರು, ಜೂ 06 (DaijiworldNews/MS): ಕೊಯಮತ್ತೂರಿನಲ್ಲಿ ಪುಡ್ ಡೆಲಿವರಿ ಏಜೆಂಟ್ಗೆ ಕಪಾಳಮೋಕ್ಷ ಮಾಡಿದ ಟ್ರಾಫಿಕ್ ಪೊಲೀಸ್ ಪೇದೆಯನ್ನು ಬಂಧಿಸಿ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಹಾರ ವಿತರಣಾ ಏಜೆಂಟ್ ಮೋಹನಸುಂದರಂ ಅವರು ನೀಡಿರುವ ದೂರು ಮತ್ತು ವೈರಲ್ ಆಗಿರುವ ಘಟನೆಯ ವೀಡಿಯೊ ಕ್ಲಿಪ್ ಆಧರಿಸಿ, ಕಾನ್ಸ್ಟೆಬಲ್ ಸತೀಶ್ ಅವರನ್ನು ಶನಿವಾರ ತಡರಾತ್ರಿ ಬಂಧಿಸಿ ಅಮಾನತುಗೊಳಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ವಿಡಿಯೋದಲ್ಲಿ ಶುಕ್ರವಾರ ಅವಿನಾಶಿ ರಸ್ತೆಯ ಟ್ರಾಫಿಕ್ ಜಂಕ್ಷನ್ನಲ್ಲಿ ಸತೀಶ್ ಮೋಹನಸುಂದರಂ ಅವರಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ.
ಈ ನಡುವೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಸಿ ಸೈಲೇಂದ್ರ ಬಾಬು ಹೇಳಿಕೆಯಲ್ಲಿ ಮೋಹನಸುಂದರಂ ಅವರನ್ನು ಖುದ್ದಾಗಿ ದೂರವಾಣಿಯಲ್ಲಿ ಸಂಪರ್ಕಿಸಿ ಕಾನ್ಸ್ಟೇಬಲ್ ವಿರುದ್ಧ ತೆಗೆದುಕೊಂಡ ಕ್ರಮವನ್ನು ತಿಳಿಸಿ ಪುಡ್ ಡೆಲಿವರಿ ಏಜೆಂಟ್ ಯೋಗಕ್ಷೇಮ ವಿಚಾರಿಸಿದ್ದಾರೆ.
ಡೆಲಿವರಿ ಏಜೆಂಟ್ ಮೇಲೆ ದೈಹಿಕ ಹಲ್ಲೆ ನಡೆಸಿರುವ ಬಗ್ಗೆ ವಿಚಾರಣೆ ನಡೆಯುತ್ತಿದ್ದು, ಆರೋಪಿ ಪೊಲೀಸರ ವಿರುದ್ಧ ಕ್ರಿಮಿನಲ್ ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.