ನವದೆಹಲಿ, ಜೂ 06 (DaijiworldNews/MS): ಬಿಜೆಪಿಗೆ ಕಾಶ್ಮೀರವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಅವರಿಗೆ ಕೊಳಕು ರಾಜಕೀಯ ಮಾಡಲು ಮಾತ್ರ ತಿಳಿದಿದೆ. ದಯವಿಟ್ಟು ಕಾಶ್ಮೀರದಲ್ಲಿ ರಾಜಕೀಯ ಮಾಡಬೇಡಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ಆಮ್ ಆದ್ಮಿ ಪಕ್ಷದ 'ಜನ್ ಆಕ್ರೋಶ್ ರ್ಯಾಲಿ'ಯನ್ನು ಉದ್ದೇಶಿಸಿ ಮಾತನಾಡಿದ ಅವರು, 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರಿಗೆ ಏನಾಗಿತ್ತೊ ಅದು ಮತ್ತೆ ಪುನಾರವರ್ತನೆಯಾಗುತ್ತಿದೆ. ಉದ್ದೇಶಿತ ಹತ್ಯೆಗಳಿಂದಾಗಿ ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆಯುವಂತೆ ಒತ್ತಾಯಿಸಲಾಗುತ್ತಿದ್ದು, ದಾಳಿಯನ್ನು ತಡೆಯಲು ಕೇಂದ್ರವು ತಕ್ಷಣ ಕ್ರಿಯಾ ಯೋಜನೆಯನ್ನು ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.
ಕಾಶ್ಮೀರದಲ್ಲಿ ನೆಲೆಸಿರುವ ಜನರಿಗೆ ಭದ್ರತೆ ನೀಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರ್ಕಾರವು ಕಾಶ್ಮೀರಿ ಪಂಡಿತರಿಗೆ ಅಲ್ಲಿ ನಡೆದ ಹತ್ಯೆಗಳ ಬಗ್ಗೆಯೂ ಪ್ರತಿಭಟಿಸಲು ಅವಕಾಶವೂ ನೀಡುತ್ತಿಲ್ಲ. ಪ್ರತಿಭಟಿಸಿದವರನ್ನು ಬಂಧಿಸಲಾಗುತ್ತಿದ್ದು ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು , ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಪಾಕ್ ಬೆಂಬಲಿಸುತ್ತಿದ್ದು ಇಂತಹ ಕೀಳು ತಂತ್ರಗಳನ್ನು ತಕ್ಷಣ ನಿಲ್ಲಿಸಿ, ಕಾಶ್ಮೀರ ಎಂದಿಗೂ ಭಾರತದ ಭಾಗವಾಗಿರುತ್ತದೆ ಎಂದು ಹೇಳಿದ್ದಾರೆ.