ಬೆಂಗಳೂರು, ಜೂ 06 (DaijiworldNews/MS): ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ ಹೋಗಿದ್ದು ನೂಪರ್ ಶರ್ಮಾರ ಅಪಮಾನಕಾರಿ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಆಕ್ರೋಶವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು " ಬಿಜೆಪಿ ನಾಯಕರ ಧರ್ಮ ದ್ವೇಷದ ಹೇಳಿಕೆಗಳು ವಿಶ್ವ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆ. ನೂಪರ್ ಶರ್ಮಾರ ಅಪಮಾನಕಾರಿ ಹೇಳಿಕೆ ಒಂದು ಸಣ್ಣ ನಿದರ್ಶನವಷ್ಟೆ. ಈಗ ಎಲ್ಲಾ ಬಿಜೆಪಿ ನಾಯಕರಲ್ಲೂ ಧರ್ಮದ ಡ್ರಗ್ಸ್ ನಶೆ ಮಿತಿಮೀರಿ ಹೋಗಿದೆ. ಬಿಜೆಪಿ ನಾಯಕರ ಮಾತುಗಳು ದೇಶದ ಗೌರವ ಹಾಳು ಮಾಡುತ್ತಿರುವುದಲ್ಲದೆ,ದೇಶವನ್ನು ಸರ್ವನಾಶಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ಧರ್ಮ ಶ್ರೇಷ್ಟತೆಯ ವ್ಯಸನ ಅತ್ಯಂತ ಅಪಾಯಕಾರಿ. ಬಿಜೆಪಿ ನಾಯಕರು ಈ ವ್ಯಸನಕ್ಕೆ ತುತ್ತಾಗಿರುವುದಲ್ಲದೆ, ಈ ವ್ಯಸನವನ್ನು ಇಡೀ ದೇಶಾದ್ಯಾಂತ ಸಾಂಕ್ರಾಮಿಕದಂತೆ ಹರಡುತ್ತಿದ್ದಾರೆ.
ದೇಶದಲ್ಲಿ ಈಗ ದ್ವೇಷದ ವಾತಾವರಣವಿದೆ. ಇದರಿಂದ ದೇಶದ ಮಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದೆ. ಬಿಜೆಪಿಯವರು ಭಾರತವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಹಿರಿಯಕ್ಕನ ಚಾಳಿ ಮನೆ ಮಂದಿಗೆಲ್ಲಾ ಎಂಬಂತೆ ಉಚ್ಛ ಸ್ಥಾನದಲ್ಲಿರು ಬಿಜೆಪಿಯ ಎಲ್ಲಾ ನಾಯಕರ ತಲೆಯಲ್ಲೂ ಧರ್ಮಾಂಧತೆಯ ಅಮಲು ತುಂಬಿದೆ. ನೂಪುರ್ ತಮ್ಮ ನಾಯಕರ ಅಂತರ್ಗತ ಭಾವನೆಯನ್ನೇ ಮಾತುಗಳ ಮೂಲಕ ಹೊರಹಾಕಿ ಹಿರಿಯಕ್ಕನ ಚಾಳಿ ಅನುಸರಿಸಿದ್ದಾರಷ್ಟೆ. ಏನೇ ಆದರೂ ಬಿಜೆಪಿಯವರ ಈ ಧೋರಣೆ ದೇಶದ ಸ್ವಾಸ್ಥ್ಯಕ್ಕೆ ಪೂರಕವಲ್ಲ. ಇನ್ನಾದರೂ ಬದಲಾಗಿ ಬಿಜೆಪಿಯವರೇ ಎಂದು ಹೇಳಿದ್ದಾರೆ.
ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿ ನೂಪುರ್ ಶರ್ಮಾ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.