ತಮಿಳುನಾಡು, ಜೂ 06 (DaijiworldNews/MS): ಕಡಲೂರು ಜಿಲ್ಲೆಯ ಕೆದಿಲಂ ಚೆಕ್ ಡ್ಯಾಂ ಬಳಿ ಭಾನುವಾರ ಮಧ್ಯಾಹ್ನ ಹೊಂಡದ ಕೆಸರಿನಲ್ಲಿ ಸಿಲುಕಿ ಒಂದೇ ಕುಟುಂಬದ ಇಬ್ಬರು ಯುವತಿಯರು ಮತ್ತು ಐವರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.
ಮೃತರನ್ನು ನೆಲ್ಲಿಕುಪ್ಪಂ ಪಟ್ಟಣದ ಸಮೀಪ ಎ ಕೂಚಿಪಾಳ್ಯಂ ಗ್ರಾಮದ ಎಂ ನವನೀತಂ (20), ಆಕೆಯ ಅತ್ತಿಗೆ ಜಿ ಪ್ರಿಯಾ (19) , ಮತ್ತುರಜೆಗಾಗಿ ಅವರ ಮನೆಗೆ ಬಂದಿದ್ದ ಆರ್ ಪ್ರಿಯದರ್ಶಿನಿ (13) ಮತ್ತು ಆರ್ ಕವಿಯಾ (11)- ಎಂ ಸುಮತಾ (16) ಎ ಮೋನಿಕಾ (16) ಮತ್ತು ಎ ಸಂಗಾವಿ (15) ಎಂದು ಗುರುತಿಸಲಾಗಿದೆ.
ಇವರೆಲ್ಲರೂ ಕೆದಿಲಂ ನದಿಗೆ ಅಡ್ಡಲಾಗಿರುವ ಚೆಕ್ ಡ್ಯಾಂನಲ್ಲಿ ಸ್ನಾನಕ್ಕೆ ತೆರಳಿದ್ದರು. ನವನೀತಂ ಅವರ ತಂದೆ ಮೋಹನ್ ಅವರ ಪ್ರಕಾರ , “ನಾನು ನನ್ನ ಮಗಳು, ಸೊಸೆ ಮತ್ತು ಇತರ ಐದು ಸಂಬಂಧಿಕರನ್ನು ಕಳೆದುಕೊಂಡಿದ್ದು, ಎರಡು ವರ್ಷಗಳ ಹಿಂದೆ ಚೆಕ್ ಡ್ಯಾಂ ನಿರ್ಮಿಸಲು ಮರಳು ತೆಗೆದಾಗ ಅಲ್ಲೊಂದು ದೊಡ್ಡ ಹೊಂಡ ನಿರ್ಮಾಣವಾಗಿತ್ತು, ಅದನ್ನು ಮುಚ್ಚದೆ ಹಾಗೇ ಬಿಟ್ಟಿದ್ದು ಅಲ್ಲಿ ನೀರು ತುಂಬಿದ್ದು ಅದರ ಕೆಸರಿನಲ್ಲಿ ಸಿಲುಕಿ ಮುಳುಗಡೆಯಾಗಿದ್ದಾರೆ" ಎಂದು ರೋಧಿಸಿದ್ದಾರೆ.
ಜಿ . ಪ್ರಿಯಾ ಒಂದು ತಿಂಗಳ ಹಿಂದೆಯಷ್ಟೇ ನವನೀತಮ್ ಅವರ ಸಹೋದರ ಎಂ ಗುನಾಲ್ ಅವರನ್ನು ವಿವಾಹವಾಗಿದ್ದರು, ಉಳಿದ ಮೃತರೆಲ್ಲರೂ ಶಾಲಾ ವಿದ್ಯಾರ್ಥಿನಿಯರಾಗಿದ್ದರು.
ಸಂತ್ರಸ್ತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡುವಂತೆ ಸಿಎಂ ಸ್ಟಾಲಿನ್ ಆದೇಶಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಧಿಕಾರಿಗಳು ಜಲಮೂಲಗಳ ಅಪಾಯದ ಬಗ್ಗೆ ಜಾಗೃತಿ ಮೂಡಿಸಿ, ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಆದೇಶಿದ್ದಾರೆ. ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿಯೂ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.