ತಿರುವನಂತಪುರ, ಜೂ 06 (DaijiworldNews/MS): ಮಕ್ಕಳ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದಾಗುವ ದುಷ್ಪರಿಣಾಮಗಳ ದುರಂತಕ್ಕೆ ಉದಾಹರಣೆ ಎಂಬಂತೆ, ಮೊಬೈಲ್ನಲ್ಲಿ ಕೊರಿಯನ್ ವಿಡಿಯೊ ಅಲ್ಬಂ ನೋಡುವ ಚಟ ಬೆಳೆಸಿಕೊಂಡಿದ್ದ ಕೇರಳದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ವರದಿಯಾಗಿದೆ.
ತನಗೆ ಸ್ನೇಹಿತರಿಲ್ಲದ ಕಾರಣ ಮತ್ತು ತಾನು ಕಡಿಮೆ ಅಂಕಗಳನ್ನು ಗಳಿಸುತ್ತಿರುವ ಹಾಗೂ ಅತಿಯಾಗಿ ಕೊರಿಯನ್ ಬ್ಯಾಂಡ್ಗಳ ವೀಡಿಯೊಗಳಿಗೆ ಚಟ ಬೆಳೆಸಿಕೊಂಡಿರುವ ಕಾರಣ ಈ ರೀತಿಯ ತೀವ್ರ ಹೆಜ್ಜೆ ಇಟ್ಟಿದ್ದೇನೆ ಎಂದು ಬರೆದಿರುವ ಡೆತ್ನೋಟ್ ಸಹಿತ ತಿರುವನಂತಪುರದಲ್ಲಿ 16ರ ಬಾಲಕಿಯ ಶವ ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಲ್ಲಂಬಳಂ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು, ಓದಿನಲ್ಲಿ ಹಿಂದುಳಿದಿರುವುದು ಮತ್ತು ಕೊರಿಯನ್ ವಿಡಿಯೊ ನೋಡುವ ಚಟ ಬೆಳೆಸಿಕೊಂಡಿರುವುದರಿಂದ ಬಾಲಕಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅದಕ್ಕೆ ಪೂರಕವಾಗಿ ಬಾಲಕಿ ಬರೆದಿರುವ ಡೆತ್ನೋಟ್ ಸಿಕ್ಕಿದೆ. ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದಿದ್ದಾರೆ.
ಬಾಲಕಿ 10ನೇ ತರಗತಿಯವರೆಗೆ ಓದಿನಲ್ಲಿ ಮುಂದಿದ್ದಳು. 11ನೇ ತರಗತಿಗೆ ಪ್ರವೇಶಿಸಿದ ನಂತರ, ತಾಯಿಯ ಮೊಬೈಲ್ನಲ್ಲಿ ಯೂಟ್ಯೂಬ್ ಮೂಲಕ ಕೊರಿಯನ್ ವಿಡಿಯೊ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.