ನವದೆಹಲಿ, ಜೂ. 05 (DaijiworldNews/DB): ಕಾಶ್ಮೀರಿ ಪಂಡಿತರಲ್ಲಿ ಭಯ ಹುಟ್ಟಿಸಿ ಕಾಶ್ಮೀರ ತೊರೆಯುವಂತೆ ಮಾಡಲಾಗುತ್ತಿದೆ. ಕಾಶ್ಮೀರಿ ಪಂಡಿತರ ಹತ್ಯೆಗಳನ್ನು ತಡೆಯಲು ಕೇಂದ್ರ ಸರ್ಕಾರ ಆದ್ಯ ಗಮನ ಹರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
1990ರಲ್ಲಿ ನಡೆದ ಘಟನೆಗಳು ಕಾಶ್ಮೀರದಲ್ಲಿ ಮತ್ತೆ ಮರುಕಳಿಸುತ್ತಿರುವಂತೆ ಭಾಸವಾಗುತ್ತಿದೆ. ಬಿಜೆಪಿಯ ಕುತಂತ್ರದ ರಾಜಕಾರಣದಿಂದಾಗಿ ಕಾಶ್ಮೀರದಲ್ಲಿ ಪರಿಸ್ಥಿತಿ ಗೊಂದಲಮಯವಾಗಿದೆ. ಬಿಜೆಪಿಯು ಕಾಶ್ಮೀರ ವಿಚಾರದಲ್ಲಿ ರಾಜಕೀಯ ಮಾಡದೆ ಅಲ್ಲಿನ ಪಂಡಿತರ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸ ಮಾಡಬೇಕು ಎಂದರು.
ಕಾಶ್ಮೀರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ದೆಹಲಿಯ ಜಂತರ್ ಮಂತರ್ನಲ್ಲಿ ನಡೆಸುತ್ತಿರುವ ಜನಾಕ್ರೋಶ ರ್ಯಾಲಿಯನ್ನುದ್ದೇಶಿಸಿ ಅವರು ಭಾನುವಾರ ಮಾತನಾಡಿದರು.
ಪಾಕಿಸ್ತಾನವು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಭಯೋತ್ಪಾದನೆ ಮೂಲಕ ಕಾಶ್ಮೀರವನ್ನು ನಿಮ್ಮದಾಗಿಸಿಕೊಳ್ಳಬಹುದೆಂಬ ಕನಸನ್ನು ಎಂದಿಗೂ ಕಾಣಬೇಡಿ. ಕಾಶ್ಮೀರ ಎಂದಿಗೂ ಭಾರತದ ಭಾಗವೇ. ನಿಮ್ಮ ದುಷ್ಕೃತ್ಯವನ್ನು ನಿಲ್ಲಿಸಿ ಎಂದು ಪಾಕ್ಗೆ ಎಚ್ಚರಿಕೆ ನೀಡಿದರು.
ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ, ಪರಿಸರ ಸಚಿವ ಗೋಪಾಲ್ ರೈ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಮೊದಲಾದವರು ಪಾಲ್ಗೊಂಡಿದ್ದರು.