ಬಾಗಲಕೋಟೆ, ಜೂ. 05 (DaijiworldNews/DB): ಮುಂದಿನ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಜೆಡಿಎಸ್ಗೆ ನಾಯಕರು ಬರುತ್ತಾರೆಂಬ ಬಗ್ಗೆ ನನಗೆ ಗೊತ್ತಿಲ್ಲ. ಸಿ.ಎಂ. ಇಬ್ರಾಹಿಂ ಅವರಲ್ಲೇ ಕೇಳಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
2023ರ ಚುನಾವಣೆಗೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವಾರು ನಾಯಕರು ಜೆಡಿಎಸ್ ಗೆ ಬರಲಿದ್ದಾರೆ ಎಂಬ ಸಿ.ಎಂ. ಇಬ್ರಾಹಿಂ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಈ ವಿಚಾರ ಗೊತ್ತೇ ಇಲ್ಲ. ಅವರು ಸುಮಾರು ಒಂದು ದಶಕ ಕಾಂಗ್ರೆಸ್ನಲ್ಲಿ ತೊಡಗಿಸಿಕೊಂಡಿರುವ ಕಾರಣ ಯಾರೆಲ್ಲ ಬರಬಹುದೆಂಬುದು ಅವರಿಗೆ ಗೊತ್ತಿರಬಹುದು. ಅವರೇ ಹೇಳಿರುವುದರಿಂದ ಅವರಲ್ಲಿ ಕೇಳಿ ಮಾಹಿತಿ ಪಡೆದುಕೊಳ್ಳಿ ಎಂದರು.
ನಮ್ಮ ಪಕ್ಷಕ್ಕೆ ಬನ್ನಿ ಎಂಬುದಾಗಿ ನಾನು ಯಾವುದೇ ಪಕ್ಷಗಳ ಮುಖಂಡರಿಗೂ ಆಹ್ವಾನ ನೀಡಿಲ್ಲ, ಚರ್ಚೆಯನ್ನೂ ಮಾಡಿಲ್ಲ. ನಮ್ಮ ಪಕ್ಷ ಸಂಘಟನೆ ಮಾಡುವುದು ಮತ್ತು ರಾಜ್ಯದಲ್ಲಿ ಅದನ್ನು ಭದ್ರ ಪಡಿಸುವುದು ನನ್ನ ಉದ್ದೇಶ. ಚುನಾವಣೆಗೆ ಹೇಗೆ ತಯಾರಾಗಬೇಕೆಂಬ ಚಿಂತನೆ ಇದೆಯೇ ಹೊರತು ಬೇರೆ ಪಕ್ಷಗಳ ಇಟ್ಟಿಗೆ ಕಸಿಯುವ ಕೆಲಸಕ್ಕೆ ನಾಣು ಹೋಗಿಲ್ಲ. ಅದನ್ನು ಬಿಜೆಪಿ, ಕಾಂಗ್ರೆಸ್ನವರು ಮಾತ್ರ ಮಾಡುತ್ತಾರೆ ಎಂದು ಎಚ್ಡಿಕೆ ಪ್ರತಿಕ್ರಿಯಿಸಿದರು.