ನೆಲಮಂಗಲ, ಜೂ. 05 (DaijiworldNews/DB): ಗೃಹಿಣಿಯೊಬ್ಬಳು ಪತಿ ಮತ್ತು ಅತ್ತೆಯ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ವಿವರ್ಸ್ ಕಾಲನಿಯಲ್ಲಿ ನಡೆದಿದೆ.
ತುಮಕೂರಿನ ಕುಣಿಗಲ್ ಮೂಲದ ಪೂಜಾ (22) ಮೃತ ಗೃಹಿಣಿ. ಪೂಜಾ ತಮ್ಮ ಪತಿಯೊಂದಿಗೆ ಬಾಡಿಗೆ ಮನೆಗೆ ಆಗಮಿಸಿದ್ದು, ಮೊದಲು ಹಾಲು ಉಕ್ಕಿಸುವ ಕಾರ್ಯ ನಡೆಸಲಾಗಿತ್ತು. ಹಾಲು ಉಕ್ಕಿಸಿದ ಕೆಲವೇ ಹೊತ್ತಿನಲ್ಲಿ ಆಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಗೃಹಿಣಿ ಸಾವು ಹಿನ್ನೆಲೆಯಲ್ಲಿ ಆಕೆಯ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡೂವರೆ ವರ್ಷದ ಹಿಂದೆ ಮಂಜುನಾಥ್ನೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ವಿವಾಹವಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ತಾಯಿಯಿಂದ ಪೂಜಾಗೆ ಕಿರುಕುಳ ಆರಂಭವಾಗಿತ್ತು. ಮದುವೆ ಬಳಿಕ ಮೊದಲು ಗರ್ಭಿಣಿಯಾದ ಕೆಲವೇ ತಿಂಗಳಲ್ಲಿ ಪೂಜಾಗೆ ಗರ್ಭಪಾತವಾಗಿತ್ತು. ಎರಡನೇ ಮಗು ಹುಟ್ಟಿ ಆರು ತಿಂಗಳಲ್ಲಿ ಮೃತಪಟ್ಟಿತ್ತು. ಇದರಿಂದ ಆಕೆಯ ಅತ್ತೆ ಅನಿಷ್ಠಳೆಂದು ಜರಿಯುತ್ತಿದ್ದರು. ಇದರಿಂದ ಪೂಜಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದೀಗ ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರು ಪೊಲೀಸರ ವಶದಲ್ಲಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821