ಬೆಳಗಾವಿ, ಜೂ. 05 (DaijiworldNews/DB): ಬಿಜೆಪಿ, ಕಾಂಗ್ರೆಸ್ಸಿಗರು ದಯವಿಟ್ಟು ನಿಮ್ಮ ನಿಮ್ಮ ಚಡ್ಡಿ ಉದುರಿಸಿಕೊಳ್ಳಿ, ಆದರೆ ರಾಜ್ಯದ ಜನರ ಚಡ್ಡಿ ಉದುರಿಸಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಷ್ಟ್ರೀಯ ಪಕ್ಷಗಳೆರಡರ ನಾಯಕರ ಕಾಲೆಳೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಚಡ್ಡಿ ವಿಚಾರ ತೀವ್ರತೆ ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ನವರು ಚಡ್ಡಿ ಸುಡುತ್ತೇವೆ ಎನ್ನುತ್ತಾರೆ, ಗೃಹ ಸಚಿವರು ಕಾಂಗ್ರೆಸ್ನ ಚಡ್ಡಿ ಉದುರಿಸಿದ್ದೇವೆ ಎನ್ನುತ್ತಾರೆ. ಅವರು ಅವರವರ ಚಡ್ಡಿ ಉದುರಿಸಿಕೊಳ್ಳಲಿ. ಆದರೆ ರಾಜ್ಯದ ಜನರ ಚಡ್ಡಿ ಉದುರಿಸುವ ಪ್ರಯತ್ನಕ್ಕೆ ಕೈ ಹಾಕದಿರಲಿ ಎಂದು ವ್ಯಂಗ್ಯವಾಡಿದರು.
ರಾಜ್ಯದ ಜನರು ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡಲು ಬಿಜೆಪಿ ಮತ್ತು ಕಾಂಗ್ರೆಸ್ನವರು ಮುಂದಾಗಲಿ. ಜನರಿಗೆ ಅವಮಾನವಾಗುವಂತೆ ಮಾಡದಿರಲಿ ಎಂದುವರು ಇದೇ ವೇಳೆ ಕಿವಿಮಾತು ಹೇಳಿದರು.