ಹೈದರಾಬಾದ್, ಜೂ. 05 (DaijiworldNews/DB): ಸಾಮೂಹಿಕ ಅತ್ಯಾಚಾರಕ್ಕೊಳಗಾದ ತೆಲಂಗಾಣದ ಬಾಲಕಿಯ ಗುರುತು ಬಹಿರಂಗಪಡಿಸಿದ ಬಿಜೆಪಿ ಶಾಸಕ ರಘುನಂದನ್ ರಾವ್ ವಿರುದ್ದ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯೊಂದರಲ್ಲಿ ಶಾಸಕ ರಘುನಂದನ್ ರಾವ್ ಬಾಲಕಿಯ ಗುರುತು ಬಹಿರಂಗಪಡಿಸಿದ್ದರು. ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ. ರಾಜಕೀಯ ಕಾರಣಕ್ಕಾಗಿ ಇಂತಹ ಕ್ರಮ ಸರಿಯಲ್ಲ. ಸಂಘಿಗಳು, ಟಿಆರ್ಎಸ್, ಮಜಿಲೀಸ್ಗಳು ಮ್ಯಾಚ್ ಫಿಕ್ಸಿಂಗ್ ಮಾಡಿ ಪ್ರಕರಣದ ದಾರಿ ತಪ್ಪಿಸುತ್ತಿದ್ದಾರೆ. ಸಂತ್ರಸ್ತ ಬಾಲಕಿಯ ತೇಜೋವಧೆ ಮಾಡುವುದಕ್ಕೆ ಹೊರಟಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ನ ಉಸ್ತುವಾರಿ ನಾಯಕ ಮಾಣಿಕಂ ಠಾಕೂರ್ ಆಕ್ರೋಶ ಹೊರ ಹಾಕಿದ್ದಾರೆ.
ದೆಹಲಿಯಲ್ಲಿ ಅತ್ಯಾಚಾರ ಸಂತಸ್ತೆ ಬಾಲಕಿ ಗುರುತು ಬಹಿರಂಗಪಡಿಸಿದ್ದಕ್ಕಾಗಿ ರಾಹುಲ್ ಗಾಂಧಿ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತ್ತು. ಆದರೆ ತೆಲಂಗಾಣ ಶಾಸಕರು ಅಂತಹುದೇ ಕೃತ್ಯ ಎಸಗಿದರೂ, ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೆಲಂಗಾಣದಲ್ಲಿ ಚರ್ಚೆಗಳು ನಡೆಯುತ್ತಿವೆ.
ಪಬ್ನಲ್ಲಿ ಸ್ನೇಹಿತರು ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದ ಅಪ್ರಾಪ್ತೆಯ ಮೇಲೆ ಮೂವರು ಅಪ್ರಾಪ್ತರು, ಇಬ್ಬರು ವಯಸ್ಕರು ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪವಿದ್ದು, ಸದ್ಯ ಈ ಘಟನೆ ರಾಜಕೀಯ ರೂಪ ಪಡೆದುಕೊಂಡಿದೆ. ಪ್ರಭಾವಿಗಳ ಕುಟುಂಬದವರು ಆರೋಪಿಗಳಾಗಿರುವುದರಿಂದ ಈ ಘಟನೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂವರ ಬಂಧನವಾಗಿದ್ದು, ಓರ್ವ ಶಾಸಕನ ಪುತ್ರನೂ ಆರೋಪಿಯಾಗಿದ್ದಾನೆ ಎನ್ನಲಾಗಿದೆ.