ಹುಬ್ಬಳ್ಳಿ, ಜೂ. 05 (DaijiworldNews/DB): ರಾಜ್ಯದಲ್ಲಿ ಕಾಂಗ್ರೆಸ್ ಬಲ ಕ್ಷೀಣವಾಗಿದೆ. ಆರೆಸ್ಸೆಸ್ ಬಗ್ಗೆ ಕೇವಲವಾಗಿ ಮಾತನಾಡಿದರೆ ಬೇರೆ ರಾಜ್ಯಗಳಂತೆ ಇಲ್ಲಿಯೂ ನೆಲಕಚ್ಚಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಆರೆಸ್ಸೆಸ್ ಚಡ್ಡಿ ಸುಡುವ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಅವರ ನಡೆ ಸರಿಯಾದುದಲ್ಲ. ಕಳೆದ 75 ವರ್ಷಗಳಿಂದ ಜನಸೇವೆಯಲ್ಲಿ ತೊಡಗಿರುವ ಸಂಘದ ಬಗ್ಗೆ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಕೇವಲ ಸಂಘವಾಗಿರದೇ ದೇಶಭಕ್ತಿ, ಸಂಕಷ್ಟದ ಸಂದರ್ಭದಲ್ಲಿ ಸೇವೆಯಂತ ಹಲವಾರು ಕೆಲಸಗಳಲ್ಲಿ ಆರೆಸ್ಸೆಸ್ ತೊಡಗಿಸಿಕೊಂಡಿದೆ. ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ ಎಂದರು.
ಅವರು ಈ ರೀತಿಯಾಗಿ ಮಾತನಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸಂಪೂರ್ಣ ಅಸ್ತಿತ್ವ ಕಳೆದುಕೊಳ್ಳಬೇಕಾಗಿ ಬರುತ್ತದೆ ಎಂದು ಸಿಎಂ ತಿಳಿಸಿದರು.