ಕಲಬುರಗಿ, ಜೂ. 05 (DaijiworldNews/DB): ಕುಟುಂಬ ರಾಜಕಾರಣದಿಂದಲೇ ವಂಶವೃಕ್ಷ ಬೆಳೆಯಲು ಸಾಧ್ಯ. ಮೋದಿಯವರು ಮಕ್ಕಳು ಮಾಡದಿದ್ದರೆ ನಮ್ಮ ತಪ್ಪಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಕುಟುಂಬ ರಾಜಕಾರಣ ಬೇಕು. ಅದರಿಂದ ಹಿರಿಯರಿಗೆ ಗೌರವ ಸಿಗುತ್ತದೆ, ಗೌರವ ಬೆಳೆಯುತ್ತದೆ. ಕಾಂಗ್ರೆಸ್, ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿವೆ, ಅದರಲ್ಲಿ ತಪ್ಪಿಲ್ಲ. ಆದರೆ ಬಿಜೆಪಿಗೆ ಅದು ಸಾಧ್ಯವಿಲ್ಲ. ಮೋದಿಯವರು ಮಕ್ಕಳು ಮಾಡದಿದ್ದರೆ ಅದು ನಮ್ಮ ತಪ್ಪಲ್ಲ ಎಂದಿದ್ದಾರೆ.
ಬಿಜೆಪಿಯವರಿಗೆ ಮೋದಿಯಾದರೆ, ನಮಗೆ ದೇವೇಗೌಡರ ಮೇಲೆ ಅಭಿಮಾನವಿದೆ. ಕಾಂಗ್ರೆಸ್ನಲ್ಲಿ ಇಂದಿರಾ, ರಾಜೀವ್, ಸೋನಿಯಾ, ರಾಹುಲ್ ಕುಟುಂಬ ರಾಜಕಾರಣದ ಮೂಲಕ ಅಧಿಕಾರಕ್ಕೆ ಬರಲಿಲ್ಲವೇ? ರೈತರ ಮಕ್ಕಳಾದ ನಾವು ರೈತರಂತೆಯೇ ಇದ್ದೇವೆ. ದೇವೇಗೌಡರು ಬಿತ್ತನೆ ಕಾಳಿದ್ದಂತೆ. ಆದರೆ ಮೋದಿಯವರಿಗೆ ಕುಟುಂಬ ಇಲ್ಲ. ನಮಗಿದೆ, ನಾವು ಕುಟುಂಬ ರಾಜಕಾರಣ ಮಾಡುತ್ತೇವೆ ಎಂದರು.
ಆಜಾನ್ ವಿಚಾರದಲ್ಲಿ ಶ್ರೀರಾಮಸೇನೆ ನಡೆಸುತ್ತಿರುವ ಹೋರಾಟದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಮೋದ್ ಮುತಾಲಿಕ್ ಅವರಿಗೆ ದೇವರು ಒಳ್ಳೆಯ ಬುದ್ದಿ ಕೊಡಲಿ. ಗಲಾಟೆ ಎಬ್ಬಿಸಲು ಕೆಲವರು ವೃಥಾ ತಪ್ಪು ಮಾಹಿತಿಗಳನ್ನು ಹರಡಿಸುತ್ತಾರೆ. ಚುನಾವಣೆ ಸಮೀಪಿಸುವಾಗ ಇವರು ಇಂತಹ ಗಲಭೆಗಳಿಗೆ ಮುಂದಾಗುತ್ತಾರೆ. ರಾಜ್ಯ ಸರ್ಕಾರ ಇಂತಹವರುಗಳನ್ನು ಮಟ್ಟ ಹಾಕಬೇಕು ಎಂದು ಒತ್ತಾಯಿಸಿದರು.
ಪಠ್ಯ ಬದಲಾವಣೆ ಸಂಬಂಧಿಸಿ ಬಸವಣ್ಣ, ಕುವೆಂಪು ಮತ್ತು ಇತರ ಶ್ರೇಷ್ಠ ವ್ಯಕ್ತಿಗಳಿಗೆ ಅವಮಾನ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು. ಬಸವ ಪರಂಪರೆಯಲ್ಲಿ ಹುಟ್ಟಿದ ಬೊಮ್ಮಾಯಿಯವರು ತಪ್ಪೆಸಗಿದವರ ಮೇಲೆ ಕ್ರಮ ಕೈಗೊಳ್ಳದೆ ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದರು.
ಮಸೀದಿಯಲ್ಲಿ ಶಿವಲಿಂಗ ಹುಡುಕುವುದು ಬೇಡ ಎಂಬ ಮೋಹನ್ ಭಾಗವತ್ ಹೇಳಿಕೆ ಒಳ್ಳೆಯ ಮನಸ್ಸಿನಿಂದಲೇ ಕೂಡಿದೆ ಎಂದು ಭಾವಿಸುತ್ತೇನೆ. ಇದನ್ನವರು ಸರ್ಕಾರಕ್ಕೆ ಹೇಳಬೇಕು. ಆರೆಸ್ಸೆಸ್ ಸಿದ್ದಾಂತ ಕೇಶವಕೃಪಾ, ನಮ್ಮದು ಬಸವಕೃಪಾ ಆಗಿದೆ ಎಂದು ಉತ್ತರಿಸಿದರು.