ಚಂಡೀಗಡ, ಜೂ. 04 (DaijiworldNews/DB): ಪಂಜಾಬ್ ಕಾಂಗ್ರೆಸ್ನ ಹಲವು ಮಂದಿ ನಾಯಕರು ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸೇರ್ಪಡೆಯಾದವರ ಪೈಕಿ ನಾಲ್ವರು ಮಾಜಿ ಸಚಿವರೂ ಇದ್ದಾರೆ.
ಮಾಜಿ ಸಚಿವರಾದ ರಾಜ್ ಕುಮಾರ್ ವೆರ್ಕಾ, ಬಲ್ಬಿರ್ ಸಿಂಗ್ ಸಿಧು, ಸುಂದರ್ ಶ್ಯಾಮ್ ಅರೋರ ಮತ್ತು ಗುರ್ಪ್ರೀತ್ ಸಿಂಗ್ ಕಂಗಾರ್, ಮಾಜಿ ಶಾಸಕ ಬರ್ನಲ್ ಕೆವಾಲ್ ಧಿಲ್ಲಾನ್ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರ್ಪಡೆಯಾದವರು. ಇವರೊಂದಿಗೆ ಎಸ್ಎಡಿಯ ಮಾಜಿ ಶಾಸಕ ಸರೂಪ್ ಚಂದ್ ಸಿಂಗ್ಲಾ ಮತ್ತು ಮೋಹಿಂದರ್ ಕೌರ್ ಜೋಶ್ ಅವರೂ ಕೇಸರಿ ಪಕ್ಷವನ್ನು ನೆಚ್ಚಿಕೊಂಡಿದ್ದಾರೆ. ಇವರೆಲ್ಲರೂ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಸೋಮ್ ಪ್ರಕಾಶ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಶ್ವಿನಿ ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಪಾದಾರ್ಪಣೆ ಮಾಡಿದರು.
ಬಲ್ಬೀರ್ ಸಿಧು ಮೊಹಾಲಿಯಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಸಹೋದರ ಮೊಹಾಲಿ ಪಾಲಿಕೆ ಮೇಯರ್ ಅಮರ್ಜಿತ್ ಸಿಂಗ್ ಸಿಧು ಕೂಡಾ ಕೇಸರಿ ಪಕ್ಷವನ್ನು ಸೇರಿಕೊಂಡಿದ್ದಾರೆ. ಗುರ್ಪ್ರೀತ್ ಅವರು ರಾಮ್ಪುರ ಫುಲ್ನಿಂದ ಮೂರು ಸಲ ಕಾಂಗ್ರೆಸ್ನಿಂದ ಜಯ ಗಳಿಸಿದ್ದರು. ಅಲ್ಲದೆ, ರಾಜ್ ಕುಮಾರ್ ಅವರು ಪ್ರಭಾವಿ ದಲಿತ ನಾಯಕರಾಗಿ ಗುರುತಿಸಿಕೊಂಡಿದ್ದರು.