ಹುಬ್ಬಳ್ಳಿ, ಜೂ. 04 (DaijiworldNews/DB): ರಾಜ್ಯ ಸಭೆ ಚುನಾವಣೆಗೆ ಸಂಬಂಧಿಸಿದಂತೆ ನಾನು ಸೋನಿಯಾ ಗಾಂಧಿ ಅಥವಾ ಯಾವುದೇ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿಲ್ಲ. ಇಂತಹ ವದಂತಿಗಳು ಸತ್ಯಕ್ಕೆ ದೂರವಾಗಿರುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ಗೆ ಯಾವುದೇ ನಡುಕ, ತಳಮಳ ಇಲ್ಲ. ಅಂತಹ ಚರ್ಚೆಗಳಿಗೆ ಕಿವಿಗೊಡುವ ಅವಶ್ಯಕತೆಯೂ ಇಲ್ಲ. ಆದರೆ ಕಾಂಗ್ರೆಸ್ನವರು ಅನಗತ್ಯ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇವೆ. ಮೂರ್ನಾಲ್ಕು ಮಂದಿಯಲ್ಲಿ ಅಸಮಾಧಾನ ಇರುವುದು ನಿಜ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಹೋಗುವ ಕೆಲಸ ಆಗುತ್ತಿದೆ ಎಂದರು.
ಹತ್ತು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಿ ಜನರಿಗೆ ವಸ್ತುಸ್ತಿತಿಯನ್ನು ಮನವರಿಕೆ ಮಾಡುವ ಕೆಲಸ ಮಾಡಲಾಗುವುದು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 123 ಸೀಟ್ ಗೆಲ್ಲುವುದು ನಮ್ಮ ಉದ್ದೇಶ. ಅದಕ್ಕಾಗಿ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆಗಾಗಿ ಸಿದ್ದತೆಗಳು ನಡೆಯುತ್ತಿವೆ ಎಂದವರು ತಿಳಿಸಿದರು.
ಎರಡು ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ನಾನು ಮಾಡಿದ ಕೆಲಸ ಜನರಿಗೆ ನೆನಪಿದ್ದರೆ ಮತ್ತೊಂದು ಬಾರಿ ನಮ್ಮ ಅಭ್ಯರ್ಥಿಗೆ ಆದ್ಯತೆ ನೀಡಬೇಕು ಎಂದರು.