ಬೆಂಗಳೂರು, ಜೂ. 04 (DaijiworldNews/DB): ಬಿಜೆಪಿ ಮುಖಂಡನ ಹತ್ಯಾಯತ್ನಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ಗಳಿಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ತುಮಕೂರು ಜಿಲ್ಲಾ ಬಿಜೆಪಿ ಮುಖಂಡ ಓಂಕಾರೇಶ್ವರ ಅವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಏಪ್ರಿಲ್ 12ರಂದು ನಡೆದಿತ್ತು. ಈ ಕುರಿತು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೆಂಗಳೂರಿನ ಕೆ.ಆರ್. ವೃತ್ತದ ಪಿಡಬ್ಲುಡಿಯ ಪಿಆರ್ ಎಎಂಸಿ ವಿಭಾಗದ ಇಂಜಿನಿಯರ್ ಎಂ. ಅಶ್ವಿನಿ ಹಾಗೂ ತುಮಕೂರು ಲೋಕೋಪಯೋಗಿ ವೃತ್ತದ ಎಇ ಶಂಭುಕುಮಾರ್ ವಿರುದ್ಧ ಹತ್ಯಾಯತ್ನ ದೂರು ದಾಖಲು ಮಾಡಲಾಗಿತ್ತು. ಬಳಿಕ ಎಂ. ಅಶ್ವಿನಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧಕ್ಕೆ ಒಪ್ಪಿಸಿದ್ದರು. ಮತ್ತೋರ್ವ ಆರೋಪಿ ಶಂಭುಕುಮಾರ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಇದೀಗ ಇಬ್ಬರನ್ನೂ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.