ಬೆಂಗಳೂರು, ಜೂ 04 (DaijiworldNews/HR): ಈಶ್ವರಪ್ಪ ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಸಚಿವ ಬಿ.ಸಿ. ನಾಗೇಶ್ ಮನೆ ಎದುರು ಪ್ರತಿಭಟನೆ ನಡೆಸಿದ ಎನ್ಎಸ್ಯುಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಗೂಂಡಾಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಚಡ್ಡಿ ಸುಡುವ ಪ್ರತಿಭಟನೆ ನಡೆಸುವುದಾಗಿ ವಿಪಕ್ಷ ಸಿದ್ದರಾಮಯ್ಯ ನೀಡಿರುವ ಹೇಳಿಕೆ ನೀಡಿದ್ದು, ಇದಕ್ಕೆ ತಿರುಗೇಟು ನೀಡಿದ್ದ ಕೆ.ಎಸ್. ಈಶ್ವರಪ್ಪ, ಚಡ್ಡಿಗೆ ಬೆಂಕಿ ಹಚ್ಚಿ ನೋಡಿ, ನಿಮ್ಮ ಬುಡ ಬೇಯಲಿದೆ ಎಂದು ಹೇಳಿದ್ದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಕೆ.ಎಸ್. ಈಶ್ವರಪ್ಪ ಅವರ ಭ್ರಷ್ಟಾಚಾರದ ಬೆಂಕಿ ರಾಜ್ಯವನ್ನಷ್ಟೇ ಅಲ್ಲ, ಗುತ್ತಿಗೆದಾರರ ಬದುಕನ್ನೇ ಸುಟ್ಟಿದೆ. ಚಡ್ಡಿ ಅಂದರೆ ಬಿಜೆಪಿಗರಿಗೆ ಏಕಿಷ್ಟು ಅಮರಪ್ರೇಮ? ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಚಟಪಟ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ? ಅಥವಾ ಚಡ್ಡಿಯನ್ನೇ ಬಿಜೆಪಿ ಧ್ವಜವನ್ನಾಗಿ ಸ್ವೀಕರಿಸಿದೆಯಾ..? ಎಂದು ಪ್ರಶ್ನಿಸಿದೆ.
ಲೋಕೋದ್ಧಾರಕ್ಕಾಗಿ ಈಶ್ವರ ವಿಷ ನುಂಗಿ ವಿಷಕಂಠನಾದ. ಆದರೆ 40% ಕಮಿಷನ್ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ವಿಷ ನುಂಗುವಂತೆ ಮಾಡಿದ ಪ್ರಾಣಕಂಟಕ ಗಂಜಿಗಿರಾಕಿ ನೀವು. ಕೈ ಜಾರಿ ಹೋಗಿರುವ ಮಂತ್ರಿಗಿರಿಗಾಗಿ ಆರೆಸ್ಸೆಸ್ಗೆ ಅದೆಷ್ಟು ಬಕೆಟ್ ಹಿಡಿಯುತ್ತೀರಿ? ನೀವು ಬಕೆಟ್ ಅಲ್ಲ ಹಂಡೆ ಹಿಡಿದರೂ ಜನರ ವಿಶ್ವಾಸ ಪಾತ್ರೆ ತುಂಬುವುದಿಲ್ಲ ಎಂದು ವಾಗ್ದಾಳಿ ನಡೆಸಿದೆ.