ಮೈಸೂರು, ಜೂ. 04 (DaijiworldNews/DB): ವಿವಾದ, ಗೊಂದಲಗಳು ಹೆಚ್ಚಾಗಲು ಸರ್ಕಾರದ ಮೌನವೇ ಕಾರಣ. ಸರ್ಕಾರ ಮಧ್ಯಪ್ರವೇಶ ಮಾಡಿ ಸೌಹಾರ್ದ ವಾತಾವರಣ ಸ್ಥಾಪಿಸಿದ್ದರೆ ಇಂತಹ ಪರಿಸ್ಥಿತಿಗಳು ನಿರ್ಮಾಣವಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮುದಾಯಗಳನ್ನು ಗುರಿಯಾಗಿಸಿಕೊಂಡು ಕೆಣಕುವುದು, ನೋವುಂಟು ಮಾಡುವುದು ಸರಿಯಲ್ಲ. ಎಲ್ಲರಿಗೂ ಒಂದೇ ಸಂವಿಧಾನ, ಅದನ್ನು ಪ್ರತಿಯೊಬ್ಬರೂ ಪಾಲಿಸಬೇಕು. ವಿವಾದಗಳು ನಿರ್ಮಾಣವಾದರೆ ತತ್ಕ್ಷಣ ಸರ್ಕಾರ ಮಧ್ಯಪ್ರವೇಶ ಮಾಡಿ ಅದನ್ನು ತಿಳಿಯಾಗಿಸುವ ಪ್ರಯತ್ನ ಮಾಡಬೇಕು. ಆದರೆ, ಸದ್ಯ ಸರ್ಕಾರ ಮೌನವಾಗಿರುವುದರಿಂದ ಅಂತಹವುಗಳು ಹೆಚ್ಚಾಗುತ್ತಿವೆ. ಬೆಳೆಯುತ್ತಿರುವ ರಾಜ್ಯಕ್ಕೆ ಇದು ಶೋಭೆಯಲ್ಲ ಎಂದರು.
ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಕುರಿತು ಅನಗತ್ಯ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಈ ಬಗ್ಗೆ ಪುರಾತತ್ವ ಇಲಾಖೆಗೆ ಪತ್ರ ಬರೆದಿದ್ದು, ಇತಿಹಾಸ, ಸತ್ಯ ಸಂಗತಿ ತಿಳಿಸಲು ಹೇಳಿದ್ದೇನೆ. ಟಿಪ್ಪು ಅರಮನೆಯ ಮುಂಭಾಗದಲ್ಲೇ ರಂಗನಾಥಸ್ವಾಮಿ ದೇಗುಲವಿದ್ದು, ಟಿಪ್ಪು ಜೀರ್ಣೋದ್ದಾರ ಮಾಡಿರುವುದಕ್ಕೆ ದಾಖಲೆಗಳೂ ಇವೆ. ಸುಮ್ಮನೆ ಇತಿಹಾಸ ತಿರುಚುವ ಕೆಲಸವನ್ನು ಯಾರೂ ಮಾಡಬಾರದು ಎಂದವರು ಮನವಿ ಮಾಡಿದರು.