ಬೆಂಗಳೂರು, ಜೂ. 04 (DaijiworldNews/DB): ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ ಆರೋಪಿ ನಾಗೇಶ್ಗೆ ಕೊನೆಗೂ ತಾನು ಮಾಡಿದ ತಪ್ಪಿನ ಅರಿವಾಗಿದ್ದು, ಇದನ್ನು ಪೊಲೀಸರ ಬಳಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ನಾನು ದೊಡ್ಡ ತಪ್ಪು ಮಾಡಿದದೇನೆ. ನಾನು ಆ ಹುಡುಗಿಗೆ ಆಸಿಡ್ ಹಾಕಬಾರದಿತ್ತು. ನನಗೆ ಸಿಗದವಳು ಬೇರೆಯವರಿಗೆ ಸಿಗಬಾರದು ಎಂಬ ಕಾರಣಕ್ಕೆ ಹಾಗೆ ಮಾಡಿದೆ. ಆದರೆ ಆಸಿಡ್ ಹಾಕಿದ ಮರುಕ್ಷಣವೇ ಭಯದಿಂದ ಊರು ಬಿಟ್ಟೆ. ನನಗೆ ದೊಡ್ಡ ಶಿಕ್ಷೆಯೇ ಆಗಬೇಕು ಎಂದು ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ.
ನಮ್ಮ ಅಣ್ಣ ನನಗೆ ಗದರಿದ್ದಕ್ಕೆ ಆ ರೀತಿ ಮಾಡಿಬಿಟ್ಟೆ. ಆಕೆಗೆ ಆಸಿಡ್ ಹಾಕಿದ ಮರುಕ್ಷಣವೇ ಸಾಯಬೇಕು ಎಂದು ನಿರ್ಧರಿಸಿದೆ. ಆದರೆ ಭಯದಿಂದ ಸಾಯಲು ಮನಸ್ಸಾಗಲಿಲ್ಲ. ಈ ಹಿಂದೆ ನಮ್ಮಿಬ್ಬರ ಮನೆಯೂ ಅಕ್ಕಪಕ್ಕದಲ್ಲೇ ಇದ್ದು,ಇಬ್ಬರೂ ಚೆನ್ನಾಗಿ ಮಾತನಾಡುತ್ತಿದ್ದೆವು. ಆಕೆ ನನ್ನೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದದ್ದಕ್ಕೆ ಆಕೆಗೆ ನನ್ನ ಮೇಲೆ ಲವ್ ಇರಬಹುದು ಎಂದುಕೊಂಡೆ. ಆದರೆ ಅವಳಿಗೆ ನನ್ನ ಮೇಲೆ ಪ್ರೀತಿ ಇರಲಿಲ್ಲ. ಬಳಿಕ ನಮ್ಮ ಮನೆಯವರೂ ದೂರ ಮಾಡಲು ನೋಡಿದ್ದರು. ಎರಡು ವರ್ಷದ ಹಿಂದೆಯೂ ಆಸಿಡ್ ಎರಚಲು ಯೋಜಿಸಿದ್ದೆ. ಆದರೆ ಕೊರೊನಾ ಸಂದರ್ಭದಲ್ಲಿ ಓಡಾಡುವುದಕ್ಕೆ ಸಾಧ್ಯವಾಗದಿದ್ದರಿಂದ ಆ ಯೋಚನೆಯನ್ನು ಕೈ ಬಿಟ್ಟಿದ್ದೆ ಎಂದು ಕಾಮಾಕ್ಷಿಪಾಳ್ಯದ ಪೊಲೀಸರೆದುರು ಆತ ಹೇಳಿಕೊಂಡಿದ್ದಾನೆ ಎಂಬುದಾಗಿ ವರದಿ ತಿಳಿಸಿದೆ.
ಸುಂಕದಕಟ್ಟೆಯಲ್ಲಿ ಹಾಡಹಗಲೇ ಯುವತಿಯ ಮೇಲೆ ಆಯಸಿಡ್ ದಾಳಿ ನಡೆಸಿ, ತಮಿಳುನಾಡಿನಲ್ಲಿ ತಲೆಮರೆಸಿಕೊಂಡು 16 ದಿನಗಳ ಬಳಿಕ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ ನಾಗೇಶ್ ಕೊನೆಗೂ ತಾನು ಮಾಡಿದ್ದು ಬಹಳ ದೊಡ್ಡ ತಪ್ಪು ಎಂದು ಪಶ್ಚಾತಾಪದ ಮಾತುಗಳಾಡಿದ್ದಾನೆ.
ಆಕೆ ಕಾಲೇಜಿನಲ್ಲಿದ್ದಾಗಲೂ ಆಕೆಯ ಬಳಿ ಯಾರಾದರೂ ಮಾತನಾಡುವುದು, ಆಕೆಯನ್ನು ನೋಡುವುದು ಮಾಡಿದರೆ ಅವರ ವಿರುದ್ದ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತಿದ್ದೆ ಎಂಬುದನ್ನೂ ಆರೋಪಿ ಹೇಳಿದ್ದಾನೆ. ಕೆಲ ಸಮಯದ ಹಿಂದೆ ಆಕೆಯೆದುರು ಮದುವೆ ಪ್ರಸ್ತಾಪ ಇಟ್ಟಾಗ ಆಕೆ ಒಪ್ಪದ ಕಾರಣ ಮತ್ತು ನನ್ನ ಅಣ್ಣಿಗೆ ಹೇಳಿದ್ದರಿಂದ ನಾನು ಈ ತಪ್ಪು ಮಾಡಿಬಿಟ್ಟೆ. ಮುಂದೆಂದೂ ಈ ರೀತಿಯ ತಪ್ಪು ಎಸಗುವುದಿಲ್ಲ. ಮದುವೆಯೂ ಆಗದೆ, ನನ್ನ ಪಾಡಿಗೆ ಇದ್ದು ಬಿಡುತ್ತೇನೆ. ಒಳ್ಳೆಯವನಾಗಿ ಬದುಕುತ್ತೇನೆ ಎಂದು ಆರೋಪಿ ಪೊಲೀಸರೆದುರು ಪಶ್ಚಾತ್ತಪದ ಮಾತುಗಳನ್ನಾಡಿದ್ದಾನೆ ಎನ್ನಲಾಗಿದೆ.