ಬೆಂಗಳೂರು, ಜೂ. 04 (DaijiworldNews/DB): ನಿರುದ್ಯೋಗಿಗಳಿಗೆ ಯುವತಿಯರ ಮೂಲಕ ಫೋನ್ ಮಾಡಿಸಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಇಬ್ಬರನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜರಾಜೇಶ್ವರಿ ನಗರದ ರಘು ಅಲಿಯಾಸ್ ನವನೀತ್ (27) ಮತ್ತು ಗಾಯತ್ರಿ ನಗರದ ಸಾಯಿಕಿರಣ್ (25) ಬಂಧಿತರು. ಆರೋಪಿಗಳಿಂದ 11 ಮೊಬೈಲ್, 2 ಸಿಪಿಯು, 1 ಲ್ಯಾಪ್ಟಾಪ್ ಹಾಗೂ 43 ಸಾವಿರ ರೂ.ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪಿಯುಸಿ ಓದಿಕೊಂಡಿರುವ ಇಬ್ಬರು ಆರೋಪಿಗಳು ಅಕ್ರಮ ಹಣ ಸಂಪಾದಿಸುವ ಕುರಿತು ಆನ್ಲೈನ್ನಲ್ಲಿ ಹುಡುಕಾಡಿದ್ದರು. ಈ ರೀತಿಯ ವಂಚನೆಯಿಂದ ಯಾರಿಗೂ ಗೊತ್ತಾಗುವುದಿಲ್ಲ ಎಂದು ಈ ದಾರಿ ಹಿಡಿದುಕೊಂಡಿರುವುದಾಗಿ ಬಂಧಿತರು ಪೊಲೀಸರೆದುರು ಬಾಯ್ಬಿಟ್ಟಿದ್ದಾರೆ.
ಎಚ್ಎಸ್ಆರ್ ಲೇಔಟ್ನಲ್ಲಿರುವ ಅಲ್ಕಾನ್ ಲ್ಯಾಬೋರೇಟರಿಸ್ ಇಂಡಿಯಾ ಪ್ರೈವೇಟ್.ಲಿಮಿಡೆಟ್ ಕಂಪನಿ ಹೆಸರು ಮತ್ತು ಲೋಗೋ ಬಳಸಿಕೊಂಡು ಇತ್ತೀಚೆಗೆ ಆರೋಪಿಗಳಿಬ್ಬರು ಕಚೇರಿ ತೆರೆದಿದ್ದರು. ಬಳಿಕ ಇದೇ ಕಂಪೆನಿ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿ ತೆರೆದು ಯುವತಿಯರ ಮೂಲಕ ನಿರುದ್ಯೋಗಿಗಳಿಗೆ ಕರೆ ಮಾಡಿಸುತ್ತಿದ್ದರು. ಆನಂತರ ಸಂದರ್ಶನ, ವಿವಿಧ ಪರೀಕ್ಷೆಗಳಿಗಾಗಿ ಹಣ ಕೀಳುತ್ತಿದ್ದರು. ವಂಚನೆಗೊಳಗಾದ ಅಭ್ಯರ್ಥಿಯೊಬ್ಬರಿಗೆ ಕಳೆದ ಡಿಸೆಂಬರ್ನಲ್ಲಿ ಶುಲ್ಕದ ಹೆಸರಿನಲ್ಲಿ ಹತ್ತು ಸಾವಿರ ರೂ. ವಂಚಿಸಿದ್ದ ಕಾರಣ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದರಿಂದಾಗಿ ವಂಚನೆಯ ಜಾಲ ಬಯಲಿಗೆ ಬಂದಿದೆ.
ವಿವಿಧ ಕಂಪೆನಿಗಳ ಹೆಸರಿನಲ್ಲಿ ಕಚೇರಿ ತೆರೆದು ಯುವತಿಯರನ್ನು ಎಚ್ಆರ್ ಕೆಲಸಕ್ಕೆ ನೇಮಿಸಿಕೊಂಡು ತಾವು ಹೇಳಿದಂತೆ ಕೇಳಬೇಕೆಂದು ತಾಕೀತು ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಅಕ್ರಮವಾಗಿ ಹಣ ಸಂಪಾದನೆಯನ್ನು ಈ ಅಭ್ಯರ್ಥಿಗಳು ಮಾಡುತ್ತಿದ್ದರು. ಈ ವರೆಗೆ ಸಾವಿರಾರು ಮಂದಿಗೆ ಇದೇ ರೀತಿ ವಂಚನೆ ಎಸಗಿದ್ದು, ಬ್ಯಾಡರಹಳ್ಳಿ, ಬಸವೇಶ್ವರನಗರ, ಅನ್ನಪೂರ್ಣೇಶ್ವರಿನಗರ ಹಾಗೂ ಸುಬ್ರಹ್ಮಣ್ಯನಗರ ಠಾಣೆಗಳಲ್ಲಿ ಆರೋಪಿಗಳ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ಲಿಕೇಷನ್ ಶುಲ್ಕ ಎಂದು 250 ರೂ. ಪಡೆದುಕೊಳ್ಳುತ್ತಿದ್ದರು. ಬಳಿಕ ಮೊದಲ ಸುತ್ತಿನ ಸಂದರ್ಶನ ಮತ್ತು ಪರೀಕ್ಷೆಗೆ ಆಯ್ಕೆ ಮಾಡಿ ಅದಕ್ಕಾಗಿ 2,500 ರೂ., ಆನ್ಲೈನ್ ಅಥವಾ ನೇರ ಸಂದರ್ಶನ ನಡೆಸಿ ಎರಡನೇ ಸುತ್ತಿಗೆ ಆಯ್ಕೆಯಾಗಿದ್ದೀರೆಂದು ನಂಬಿಸಿ 7,500 ರೂ. ಗಳನ್ನ ಪಡೆದುಕೊಳ್ಳುತ್ತಿದ್ದರು. ಬಳಿಕ ಕೆಲಸ ನೀಡದೆ ವಂಚನೆ ಎಸಗುತ್ತಿದ್ದರು. ಎಚ್ಆರ್ ಕೆಲಸಕ್ಕೆ ನೇಮಿಸಿಕೊಂಡಿದ್ದ ಯುವತಿಯರನ್ನೂ ಎರಡು ತಿಂಗಳು ಕೆಲಸ ಮಾಡಿಸಿಕೊಂಡು ಸಂಬಳ ನೀಡದೆ ಕೆಲಸದಿಂದ ತೆಗೆದು ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
2017ರಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಾಟೆಯಲ್ಲಿ ಆರೋಪಿಗಳು ಭಾಗವಹಿಸಿದ್ದಲ್ಲದೆ, ಇಲ್ಲಿ ಬಸ್, ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚುವುದು, ಗಲಾಟೆಗೆ ಪ್ರಚೋದನೆ ಮುಂತಾದ ಕೃತ್ಯಗಳಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು. ಇದಕ್ಕಾಗಿ ಬಂಧಿಸಲ್ಪಟ್ಟ ಆರೋಪಿಗಳು ಜೈಲನಿಂದ ಬಿಡುಗಡೆಯಾದ ಬಳಿಕ ಉದ್ಯೋಗ ವಂಚನೆ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.