ಬೆಂಗಳೂರು, ಜೂ. 04 (DaijiworldNews/DB): ಆರೆಸ್ಸಸ್ನ ಒಂದು ಚಡ್ಡಿಯನ್ನು ನಮ್ಮ ಕಾರ್ಯಕರ್ತರು ಸುಟ್ಟರುವುದು ಸರ್ಕಾರ ಮತ್ತು ಪೊಲೀಸರಿಗೆ ದೊಡ್ಡ ಅಪರಾಧವಾಗಿ ಕಂಡಿದೆ. ಹೀಗಾಗಿ ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಹಮ್ಮಿಕೊಳ್ಳುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಸಂದರ್ಭ ಸಾಂಕೇತಿಕವಾಗಿ ಆರೆಸ್ಸೆಸ್ ಚಡ್ಡಿ ಸುಟ್ಟಿರುವುದು ಅಪರಾಧವಾಗಿ ಕಂಡಿದೆ. ಅವರೇನು ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿಲ್ಲ. ಇದನ್ನು ಕಾನೂನು ಉಲ್ಲಂಘನೆ ಎಂದಿರುವುದು ಸರಿಯಲ್ಲ. ನ್ಯಾಯಕ್ಕಾಗಿ ಹೋರಾಟ ಮಾಡುವ ಹಕ್ಕನ್ನು ಸಂವಿಧಾನವೇ ನೀಡಿದೆ. ಕಂಪೌಂಡ್ ಗೇಟ್ ತೆಗೆದು ಒಳ ಹೋದಾಗ ಪೊಲೀಸರು ತಡೆಯಬೇಕಿತ್ತಲ್ಲವೇ? ಯಾಕೆ ಹಾಗೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಪ್ರತಿಭಟನೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಚಡ್ಡಿ ಸುಡುವ ಅಭಿಯಾನ ಆರಂಭಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ ಹರ್ಷ ಕೊಲೆ ಪ್ರಕರಣ ಸಂಬಂಧ ಪ್ರತಿಭಟನೆ ನಡೆದ ವೇಳೆ ಮಾಜಿ ಸಚಿವ ಈಶ್ವರಪ್ಪ 144 ಸೆಕ್ಷನ್ ಜಾರಿಯಲ್ಲಿದ್ದಾಗಲೇ ಪ್ರತಿಭಟನೆ, ಮೆರವಣಿಗೆ ಮಾಡಿದರು. ಅದು ಕಾನೂನು ವಿರೋಧಿಯಾಗಿ ಕಾಣಲಿಲ್ಲವೇ? ಅವರ ಮೇಲೆ ಗೃಹ ಸಚಿವರು ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು ಎಂದವರು ಇದೇ ವೇಳೆ ಪ್ರಶ್ನಿಸಿದರು.
ಇನ್ನುಸಿದ್ದರಾಮಯ್ಯ ಹೇಳಿಕೆಗೆ ಟ್ವೀಟ್ ಮುಖಾಂತರ ತಿರುಗೇಟು ನೀಡಿರುವ ಮಾಜಿ ಸಚಿವಕೆ.ಎಸ್. ಈಶ್ವರಪ್ಪ, ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ, ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಆರೆಸ್ಸೆಸ್ ತಂಟೆಗೆ ಬರಬೇಡಿ ಹುಷಾರ್ ಎಂದಿದ್ದಾರೆ.
ರಾವಣ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ಲಂಕೆಯೇ ಸುಟ್ಟು ಹೋಯಿತು. ಕಾಂಗ್ರೇಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ. ಇನ್ನು ಬೆಂಕಿ ಹಚ್ಚುವುದೊಂದೇ ಕೆಲಸ. ಆ ಕೆಲಸ ನಿಮಗಿಂತ ಚನ್ನಾಗಿ ಇನ್ಯಾರು ಮಾಡಲು ಸಾಧ್ಯಎಂದು ಪ್ರಶ್ನಿಸಿದ್ದಾರೆ.