ನವದೆಹಲಿ, ಜೂ 04 (DaijiworldNews/MS): ಬಿಜೆಪಿಯೂ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ರೈತರ ಸಭೆಯ ಸಂದರ್ಭ ಭಾರತೀಯ ರಕ್ಷಣಾ ವೇದಿಕೆಯ ಕಾರ್ಯಕರ್ತರು ತನ್ನ ಮೇಲೆ ನಡೆಸಿದ ಕಪ್ಪು ಮಸಿ ದಾಳಿಯನ್ನು "ವ್ಯವಸ್ಥಿತ ಪಿತೂರಿ" ಎಂದು ಟಿಕಾಯತ್ ದೂಷಿಸಿದ್ದಾರೆ.
ಸರ್ಕಾರ ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದು, ಇದಕ್ಕೆ ಕರ್ನಾಟಕ ಮತ್ತು ದೆಹಲಿಯಲ್ಲಿ ಅವರ ಮೇಲೆ ನಡೆದ ದಾಳಿಯೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
ಮೀರತ್ ಜಿಲ್ಲೆಯ ಜಂಗೇಠಿ ಗ್ರಾಮದ ಧರ್ಮೇಶ್ವರಿ ತೋಟದಲ್ಲಿ ನಡೆದ ಬಿಕೆಯು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, 'ಸರ್ಕಾರವು ನನ್ನ ಹತ್ಯೆಯನ್ನು ಬಯಸುತ್ತಿದೆ. ಕಾರಣ, ಟಿಕಾಯತ್ ಕುಟುಂಬ ಮತ್ತು ಸಂಘಟನೆಯನ್ನು ಮುರಿಯುವುದಾಗಿದೆ. ಆದರೆ ಇದು ಎಂದಿಗೂ ಸಾಧ್ಯವಿಲ್ಲ' ಎಂದಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಜನರಲ್ ಬಿಪಿನ್ ರಾವತ್ ಅವರ ದೆಹಲಿಯಲ್ಲಿರುವ ಮನೆಗೆ ಸಂತಾಪ ಸೂಚಿಸಲು ಹೋದಾಗ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಟಿಕಾಯತ್ ಆರೋಪಿಸಿದ್ದಾರೆ.
ಸರ್ಕಾರವು "ವಿಧ್ವಂಸಕ" ರಾಜಕೀಯದ ಮೂಲಕ ರೈತ ಸಂಘವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಟಿಕಾಯತ್ ಕುಟುಂಬವು ಒತ್ತಡಕ್ಕೆ ಮಣಿಯುವುದಿಲ್ಲ. ಟಿಕಾಯತ್ ಕುಟುಂಬವು ಯಾವಾಗಲೂ ರೈತರ ಧ್ವನಿಯಾಗಿ ನಿಂತಿದೆ ಮತ್ತು ನಿಲ್ಲುತ್ತದೆ. ಬಾಬಾ ಮಹೇಂದ್ರ ಸಿಂಗ್ ಟಿಕಾಯತ್ ನಂತರ, ನರೇಶ್ ಟಿಕಾಯತ್ ಈಗ ಈ ಉದ್ದೇಶಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದ್ದಾರೆ.ಓರ್ವ ಟಿಕಾಯತ್ಗೆ ಏನಾದರೂ ಸಂಭವಿಸಿದರೆ ಲಕ್ಷಾಂತರ ಟಿಕಾಯತ್ಗಳು ಧ್ವಜವನ್ನು ಹಾರಿಸಲು ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.