ಹುಬ್ಬಳ್ಳಿ, ಜೂ. 04 (DaijiworldNews/DB): ನೂರು ಜನ್ಮವೆತ್ತಿ ಬಂದರೂ ಜೆಡಿಎಸ್ನ್ನು ಮುಗಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ನ್ನು ಮುಳುಗಿಸುವ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆಡಿದ ಮಾತಿನ ಕುರಿತು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಪ್ರತಿಕ್ರಿಯಿಸಿದ ಅವರು, ಒಂದೇ ಕಲ್ಲಿನಿಂದ ಎರಡು ಹಕ್ಕಿ ಹೊಡೆದಿದ್ದಾರೆಂದು ಸಿದ್ದರಾಮಯ್ಯ ಭಾವಿಸಿರಬಹುದು. ಆದರೆ ಅದು ಸಾಧ್ಯವಾಗದೆ ಅವರ ತಲೆ ಮೇಲೆ ಅವರೇ ಚಪ್ಪಡಿ ಎಳೆದುಕೊಂಡಿದ್ದಾರೆ. ಜೆಡಿಎಸ್ನ್ನು ಮೂಲೆಗುಂಪು ಮಾಡುವುದಕ್ಕಾಗಲೀ, ಮುಗಿಸುವುದಕ್ಕಾಗಲೀ ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ನಮಗೆ ರಾಜ್ಯಸಭೆಗಿಂತ ವಿಧಾನಸಭಾ ಚುನಾವಣೆ ಪ್ರಮುಖವಾದದ್ದು. ಬಿಜೆಪಿಯ ಎ ಟೀಂ, ಬಿ ಟೀಂ ಯಾವುದು ಎಂಬುದು ಜೂನ್ 10ರ ಬಳಿಕ ಗೊತ್ತಾಗಲಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸೀಟ್ ಗೆಲ್ಲಲಿದೆ. ಎರಡನ್ನೂ ಗೆಲ್ಲಿಸುವುದಕ್ಕೆ ಅವರಿಂದ ಅಸಾಧ್ಯ ಎಂದರು.
ಜೆಡಿಎಸ್ ಮುಳುಗಿಸೋ ಬಗ್ಗೆ ಸಿದ್ಧರಾಮಯ್ಯ ಮಾತಿನ ಬಗ್ಗೆ ಪ್ರತಿಕ್ರಿಯಿಸಿದಂತ ಅವರು, ನೂರು ಜನ್ಮವೆತ್ತಿ ಬಂದ್ರು ಜೆಡಿಎಸ್ ಮುಗಿಸೋದಕ್ಕೆ ಆಗೋದಿಲ್ಲ. ಮೂಲೆ ಗುಂಪು ಆಗಲ್ಲ ಎಂಬುದಾಗಿ ತಿರುಗೇಟು ನೀಡಿದರು.
ಜೆಡಿಎಸ್ ಮುಳುಗುತ್ತಿರುವ ಹಡಗು ಎಂಬ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯೇ ಮುಳುಗುತ್ತಿದೆಯೇ ಹೊರತು ಜೆಡಿಎಸ್ ಅಲ್ಲ ಎಂದರು.