ವಡೋದರಾ, ಜೂ. 04 (DaijiworldNews/DB): ಸ್ವಯಂ ವಿವಾಹಕ್ಕೆ ಮುಂದಾಗಿ ದೇವಳದಲ್ಲಿ ಮದುವೆಯಾಗುವುದಾಗಿ ಘೋಷಿಸಿದ್ದ ಗುಜರಾತ್ನ ಕ್ಷಮಾ ಬಿಂದುವಿನ ಮದುವೆಗೆ ಇದೀಗ ಅಡ್ಡಿ ಎದುರಾಗಿದೆ. ದೇವಳದಲ್ಲಿ ಮದುವೆಯಾಗುವ ಆಕೆಯ ನಿರ್ಧಾರವನ್ನ ವಿರೋಧಿಸಿರುವ ಬಿಜೆಪಿ, ಇದಕ್ಕೆ ಆಸ್ಪದ ನೀಡುವುದಿಲ್ಲ ಎಂದು ತಿಳಿಸಿದೆ.
ಕಂಪನಿಯೊಂದರಲ್ಲಿ ಹಿರಿಯ ನೇಮಕಾತಿ ಅಧಿಕಾರಿಯಾಗಿರುವ 24 ವರ್ಷದ ಕ್ಷಮಾ ಬಿಂದು ತನ್ನನ್ನು ತಾನೇ ಮದುವೆಯಾಗುವುದಾಗಿ ಘೋಷಿಸಿಕೊಂಡು ದೇಶಾದ್ಯಂತ ಚರ್ಚೆ ಹುಟ್ಟಿ ಹಾಕಿದ್ದಳು. ಅಲ್ಲದೆ, ಜೂನ್ 11ರಂದು ಸಂಪ್ರದಾಯಬದ್ದವಾಗಿ ದೇವಳದಲ್ಲಿ ತನ್ನನ್ನು ತಾನೇ ಮದುವೆಯಾಗಿ, ಗೋವಾಕ್ಕೆ ಹನಿಮೂನ್ಗೆ ತೆರಳುವುದಾಗಿಯೂ ಹೇಳಿಕೊಂಡಿದ್ದಳು. ಆಕೆಯ ಈ ನಿರ್ಧಾರಕ್ಕೆ ಪೋಷಕರೂ ಒಪ್ಪಿಗೆ ಸೂಚಿಸಿದ್ದರು.
ಆದರೆ ದೇವಳದಲ್ಲಿಸ್ವಯಂ ವಿವಾಹವಾಗುವ ಆಕೆಯ ನಿರ್ಧಾರಕ್ಕೆವಡೋದರಾದ ಬಿಜೆಪಿ ನಗರ ಘಟಕದ ಉಪ ಮುಖ್ಯಸ್ಥೆ ಸುನೀತಾ ಶುಕ್ಲಾ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಹುಡುಗ, ಹುಡುಗನನ್ನು ಮತ್ತು ಹುಡುಗಿ ಹುಡುಗಿಯನ್ನು ಮದುವೆಯಾಗಬಹುದು ಎಂದು ಬರೆದಿಲ್ಲ. ತನ್ನನ್ನು ತಾನೇ ಮದುವೆಯಾಗುವ ಬಿಂದು ನಿರ್ಧಾರವು ಆಕೆ ಮಾನಸಿಕ ಅಸ್ವಸ್ಥೆ ಎಂಬುದನ್ನು ತೋರಿಸುತ್ತದೆ. ದೇವಸ್ಥಾನದಲ್ಲಿ ತನ್ನನ್ನು ತಾನು ಮದುವೆಯಾಗುವ ಆಕೆಯನ್ನು ನಾವು ಹಾಗೆ ಮಾಡಲು ಬಿಡುವುದಿಲ್ಲ. ಹಿಂದೂ ಧರ್ಮಕ್ಕೆ ವಿರುದ್ದವಾದ ಮದುವೆಗೆ ನಾವು ದೇವಳದಲ್ಲಿ ಅವಕಾಶ ನೀಡುವುದಿಲ್ಲ ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.