ಬೆಂಗಳೂರು, ಜೂ. 04 (DaijiworldNews/DB): ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಕಾರ್ಯ ಮುಗಿದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸಮಿತಿಯನ್ನು ವಿಸರ್ಜಿಸಿದೆ. ಅಲ್ಲದೆ, ಪರಿಷ್ಕೃತ ಪಠ್ಯದಲ್ಲಿರುವ ಲೋಪಗಳನ್ನು ಮತ್ತೆ ಪರಿಷ್ಕರಣೆಗೊಳಪಡಿಸಲು ಸಹಮತಿಸಿದೆ.
ಪರಿಷ್ಕೃತ ಪಠ್ಯದ ಬಗ್ಗೆ ವಿವಾದಗಳೆದ್ದ ಹಿನ್ನೆಲೆಯಲ್ಲಿ ಈ ಕುರಿತು ಶಿಕ್ಷಣ ಸಚಿವರು ವರದಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಷ್ಕರಣ ಪಠ್ಯದಲ್ಲಿ ಲೋಪಗಳಿವೆ ಎಂಬುದಾಗಿ ಕೆಲವರು ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ. ಅವುಗಳನ್ನು ಮತ್ತೆ ಪರಿಷ್ಕರಿಸಲಾಗುವುದು. ಆದರೆ ಹಳೆಯ ಪಠ್ಯವನ್ನು ಮುದ್ರಿಸಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪಠ್ಯದಲ್ಲಿ ಬಸವಣ್ಣನವರ ವಿಚಾರಕ್ಕೆ ಸಂಬಂಧಿಸಿದಂತೆ ಪಂಡಿತಾರಾಧ್ಯ ಸ್ವಾಮೀಜಿಗಳು ಹಾಗೂ ನಾಡಿನ ಇತರ ಕೆಲವು ಸ್ವಾಮೀಜಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಯಾರ ಭಾವನೆಗೂ ಧಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗುವುದು. ಎಂದರು.
ಕುವೆಂಪು ಅವಹೇಳನ ಮಾಡುವ ಯಾವುದೇ ಅಂಶಗಳು ಪಠ್ಯದಲ್ಲಿಲ್ಲ. ಆದರೂ ನಾಡಗೀತೆಯ ಮೂಲ ಕವನ ತಿದ್ದಿ ಸಾಮಾಜಿಕ ತಾಣಗಳಲ್ಲಿ ಕೆಲವರು ಪೋಸ್ಟ್ ಮಾಡಿದ್ದಾರೆ. ಅಂತಹವರ ವಿರುದ್ದ ಸರ್ಕಾರ ಕಾನೂನಾತ್ಮಕ ತನಿಖೆ ಕೈಗೊಂಡು ಕ್ರಮ ವಹಿಸಲಿದೆ ಎಂದ ಅವರು, ಬರಗೂರು ಸಮಿತಿಯಲ್ಲಿ ಕುವೆಂಪು ಬಗ್ಗೆ ಇದ್ದ ಏಳು ಪಠ್ಯಗಳನ್ನು ಪ್ರಸ್ತುತ ಹತ್ತಕ್ಕೆ ಏರಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಪಠ್ಯ ಹೊಸ ಸೇರ್ಪಡೆಯಾಗಿದೆ. ಹಿಂದಿನ ಪುಸ್ತಕದಲ್ಲಿದ್ದ ಇಸ್ಲಾಂ, ಕ್ರೈಸ್ತ ಧರ್ಮದ ಪರಿಚಯದ ಜೊತೆಗೆ ಹಿಂದೂ ಧರ್ಮದ ವಿಷಯವನ್ನು ಈ ಬಾರಿ ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ. ಆದರೆ ಪ್ರಸ್ತುತ ಬಂದಿರುವ ಆಕ್ಷೇಪದಂತೆ ಮಹಾನ್ ವ್ಯಕ್ತಿಗಳ ಯಾವುದೇ ಪಾಠವನ್ನು ಸಮಿತಿ ಕೈ ಬಿಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.