ಹಾಸನ, ಜೂ. 03 (DaijiworldNews/SM): ಮದುವೆ ನಿರಾಕರಿಸಿದ್ದಕ್ಕೆ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಿಂದ ವರದಿಯಾಗಿದೆ. ಇದೀಗ ಪ್ರೇಮಿಯ ದುರಂತ ಅಂತ್ಯಕ್ಕೆ ಆಕ್ರೋಶಗಳು ಕೇಳಿ ಬರಲಾರಂಭಿಸಿದೆ.
ಮೃತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಹಾಕಿಸಿ ಯುವತಿ ಹಾಗೂ ಆಕೆಯ ಪೋಷಕರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದಲ್ಲಿ ಅನಿಲ್(24) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ. ಹೀಗಾಗಿ ಈತನ ಸ್ನೇಹಿತರು ಅನಿಲ್ ಪ್ರೇಯಸಿಯ ಕುಟುಂಬಸ್ಥರ ಫೋಟೋಗಳನ್ನು ವೈರಲ್ ಮಾಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾಲೇಬೇಲೂರು ಗ್ರಾಮದ ನಿವಾಸಿ ಅನಿಲ್, ಅದೇ ಊರಿನ ಯುವತಿಯೊಬ್ಬಳನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ. ಇಬ್ಬರು ಜೊತೆಯಾಗಿ ಓಡಾಟ ನಡೆಸುತ್ತಿದ್ದರು. ಆದರೆ, ಈ ವಿಚಾರ ಯುವತಿಯ ಪೋಷಕರಿಗೆ ಗೊತ್ತಾಗಿದ್ದೇ ತಡ ಆಕೆಗೆ ನಿರ್ಬಂಧ ವಿಧಿಸಿದ್ದಾರೆ. ಮನೆಯಿಂದ ಹೊರಹೋಗದಂತೆ ತಡೆದಿದ್ದಾರೆ. ಹುಡುಗ ಆಕೆಯ ಮನೆಯ ಬಳಿ ತೆರಳಿದರೂ ಹುಡುಗಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅನಿಲ್ ನೊಂದುಕೊಂಡಿದ್ದ. ಇದರಿಂದ ಮನನೊಂದ ಅನಿಲ್ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಫಿ ಬೆಳೆಗಾರ ಗಂಗಾಧರ್-ಪಾರ್ವತಿ ಪುತ್ರ ಅನಿಲ್, ಕಾಫಿ ಬೆಳೆಗಾರ ಶಿವರಾಂ-ಸವಿತಾ ಪುತ್ರಿ ಭಾವನಾಳನ್ನ ಪ್ರೀತಿಸುತ್ತಿದ್ದ. ಆದ್ರೆ ಭಾವನಾ ಪೋಷಕರು ಮದುವೆ ನಿರಾಕರಿಸಿದ್ದರು. ಇದರಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ಆಕೆಯ ಮನೆ ಮುಂದೆಯೇ ವಿಷ ಸೇವಿಸಿದ್ದಾನೆ. ಬಳಿಕ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಯುವಕ ಸಾವಿನಿಂದಾಗಿ ನೊಂದುಕೊಂಡಿರುವ ಆತನ ಸ್ನೇಹಿತ ವರ್ಗ ಯುವತಿಯ ಕುಟುಂಬದ ವಿರುದ್ಧ ಆಕ್ರೋಶ ಹೊರಹಾಕಿದೆ. ಮಾತ್ರವಲ್ಲದೆ, ಆಕೆಯ ಹಾಗೂ ಪೋಷಕರ ಫೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯಬಿಟ್ಟಿ ಅಸಮಾಧಾನ ಹೊರಹಾಕಿದ್ದಾರೆ. ಆತ್ಮಹತ್ಯೆ ಬಗ್ಗೆ ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.