ಬೆಂಗಳೂರು, ಜೂ. 03 (DaijiworldNews/SM): ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಎಂಟು ವರ್ಷ ಪೂರೈಸಿದ ಸಂಭ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ, ರಾಜ್ಯ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದನ್ನು ಟೀಕಿಸಿದ್ದಾರೆ. ದೇಶ ಅಭಿವೃದ್ಧಿಯಲ್ಲಿ ಹಿಮ್ಮುಖವಾಗಿ ಹೋಗಿದೆ. ಮೋದಿ ಸರಕಾರದ ಆಡಳಿತದಲ್ಲಿ ದೇಶ 20 ವರ್ಷ ಹಿಂದಕ್ಕೆ ಕುಸಿದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ. ಇದನ್ನು ನಾನು ಸೃಷ್ಟಿಸಿಕೊಂಡು ಹೇಳುತ್ತಿಲ್ಲ. ಸರ್ಕಾರದ ದಾಖಲೆಗಳೇ ಹೇಳುತ್ತಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಮೇರಿಕಾದಂತಹ ದೇಶಗಳಿಗೆ ಆರ್ಥಿಕತೆಯನ್ನು ನಿಭಾಯಿಸುವುದು ಹೇಗೆ ಎಂದು ಹೇಳಿಕೊಟ್ಟು ಮಾದರಿಯಾಗಿದ್ದ ಮನಮೋಹನಸಿಂಗರು ರೂಪಿಸಿ ತಲೆ ಎತ್ತಿ ನಿಲ್ಲವಂತೆ ಮಾಡಿದ್ದ ಭಾರತದ ಆರ್ಥಿಕತೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತವು ನೆಲ ಕಚ್ಚುವಂತೆ ಮಾಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶಕ್ಕೆ ಮುಂದೆ ಇನ್ನೂ ಕರಾಳ ದಿನಗಳು ಎದುರಾಗಲಿವೆ. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.