ಬೆಂಗಳೂರು, ಜೂ. 03 (DaijiworldNews/SM): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಗ್ಗೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಆಕ್ರೋಶ ಹೊರಹಾಕಿದ್ದಾರೆ. ನಿರ್ಮಲಾ ಸೀತಾರಾಮನ್ ನಮ್ಮ ರಾಜ್ಯಕ್ಕೆ ಅಡ್ಡಿ ಮಾಡಿದವರು ರಾಜ್ಯದ್ರೋಹಿ ಆಗಿದ್ದು, ರಾಜ್ಯಸಭೆ ಟಿಕೆಟ್ ನೀಡಬಾರದು ಎಂದಿದ್ದಾರೆ.
ರಾಜ್ಯಕ್ಕೆ ಯಾವುದೇ ಸಹಾಯ ಮಾಡದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಬರಬೇಕಿದ್ದ ಅನುದಾನ ಕೊಟ್ಟಿಲ್ಲ. ಅವರನ್ನು ಪುನಃ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುತ್ತಿರುವುದು ದೇಶದ್ರೋಹದ ಕೆಲಸ. ಅವರಿಗೆ ಮತ ಹಾಕುವ ಶಾಸಕರು ರಾಜ್ಯದ್ರೋಹಿಗಳು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಅವರು ಕಿಡಿ ಕಾರಿದ್ದಾರೆ.
ಶುಕ್ರವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಉಂಟಾದ ಪ್ರವಾಹ ಪರಿಹಾರಕ್ಕಾಗಿ 30 ಸಾವಿರ ಕೋಟಿ ರೂ. ಕೇಳಿದರೆ, ಅವರು ಕೊಟ್ಟಿದ್ದು 3,412 ಕೋಟಿ ರೂ. ಮಾತ್ರ. ಎರಡು ವರ್ಷಗಳಿಂದ 14,881 ಕೋಟಿ ರೂ. ಜಿಎಸ್ಟಿ ಪರಿಹಾರ ನಿಧಿಯನ್ನು ಬಾಕಿಯಾಗಿ ಕೇಂದ್ರ ಸರಕಾರವು ಉಳಿಸಿಕೊಂಡಿದ್ದು, ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಸಭೆಯ ಟಿಕೇಟ್ ದೊರೆತಾಗ ರಾಜ್ಯಕ್ಕೆ ಬರಬೇಕಿದ್ದ ಬಾಕಿಯಲ್ಲಿ 8,636 ಕೋಟಿ ರೂ. ಮಾತ್ರ ಬಂದಿದೆ. ಇಂತವರನ್ನು ರಾಜ್ಯದಿಂದ ಆರಿಸಿ ಕಳುಹಿಸಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.
ಹಾಗಾಗಿ ರಾಜ್ಯಸಭೆಗೆ ಸ್ಪರ್ಧಿಸಲು ನಿರ್ಮಲಾ ಸೀತಾರಾಮನ್ಗೆ ಟಿಕೆಟ್ ಕೊಟ್ಟಿದ್ದು ಸರಿಯೇ, ರಾಜ್ಯಸಭೆಗೆ ಸ್ಪರ್ಧಿಸಲು ನಮ್ಮ ರಾಜ್ಯದಲ್ಲಿ ನಾಯಕರಿಲ್ಲವೇ ಎಂದು ಪ್ರಶ್ನಿಸಿದ ಅವರು, ನಿರ್ಮಲಾ ಸೀತಾರಾಮನ್ ಅವರಿಗೆ ಮತ ಹಾಕುವ ಚುನಾಯಿತ ಪ್ರತಿನಿಧಿಗಳು ರಾಜ್ಯದ್ರೋಹಿಗಳೇ ಆಗಿರುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.