ಬೆಳಗಾವಿ, 03 (DaijiworldNews/DB): ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣ ಹಾಕಿ ಕೆಲಸ ಕಳೆದುಕೊಂಡಿದ್ದ ಮಹಿಳಾ ಕಾರ್ಮಿಕರಿಬ್ಬರು ಮರಳಿ ಕೆಲಸ ಪಡೆದುಕೊಂಡಿದ್ದಾರೆ.
ಮಲ್ಲಮ್ಮ ಹಾಗೂ ಸಾಂವಕ್ಕ ಅವರೇ ಕೆಲಸ ಮರಳಿ ಪಡೆದುಕೊಂಡವರು. ಇವರಿಬ್ಬರೂ ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ನಿಯೋಜನೆಗೊಂಡವರು. ಮಂಗಳವಾರ ಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣಹಾಕಿರುವುದರ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಅಧಿಕಾರಿಗಳು ಮಹಿಳಾ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿದ್ದರು. ಆದರೆ, ತಿಳಿಯದೆ ಮಾಡಿದ ತಪ್ಪಿಗೆ ಮಹಿಳಾ ಕಾರ್ಮಿಕರನ್ನು ವಜಾಗೊಳಿಸಿರುವುದರ ವಿರುದ್ದ ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಇಬ್ಬರೂ ಮಹಿಳೆಯರನ್ನು ಶುಕ್ರವಾರದಿಂದ ಮತ್ತೆ ಕೆಲಸಕ್ಕೆ ಬರುವಂತೆ ಸೂಚಿಸಿದರು.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲೋಕೋಪಯೊಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಲ್. ಭೀಮನಾಯಕ, ಮಹಿಳಾ ಕಾರ್ಮಿಕರಿಬ್ಬರೂ ತಿಳಿಯದೇ ತಪ್ಪೆಸಗಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕೆಂದು ತಿಳಿ ಹೇಳಲಾಗಿದೆ. ಅಲ್ಲದೆ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.