ಪಟ್ನಾ, 03 (DaijiworldNews/DB): ಕಾಶ್ಮೀರದಲ್ಲಿ ಉದ್ದೇಶಪೂರ್ವಕ ಹತ್ಯೆಗಳು ನಡೆಯಲು 'ದಿ ಕಾಶ್ಮೀರ್ ಫೈಲ್ಸ್' ಚಿತ್ರವೇ ಕಾರಣ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಹೇಳಿದ್ದಾರೆ.
ಕಾಶ್ಮೀರಿ ಪಂಡಿತರಲ್ಲಿ ಭಯ ಉಂಟು ಮಾಡುವ ಉದ್ದೇಶದಿಂದ ಈ ಚಿತ್ರ ತಯಾರಿಸಲಾಗಿದೆ. ಉಗ್ರಗಾಮಿಗಳೇ ಈ ಚಿತ್ರ ನಿರ್ಮಾಣ ಮಾಡಿರಬಹುದು ಎಂಬುದನ್ನು ಮತ್ತೊಮ್ಮೆ ಹೇಳುತ್ತಿದ್ದೇನೆ. ನಿರ್ಮಾಪಕರ ಉಗ್ರ ನಂಟಿನ ಬಗ್ಗೆ ತನಿಖೆ ನಡೆಸಬೇಕು ಎಂದವರು ಒತ್ತಾಯಿಸಿದರು.
ಇಂತಹ ಚಿತ್ರಗಳಿಂದ ಕಾಶ್ಮೀರಿ ಪಂಡಿತರು ಮರಳಿ ಕಾಶ್ಮೀರಕ್ಕೆ ಹೋಗಲು ಬಯಸುವುದಿಲ್ಲ. ಹಿಂದೂಗಳು ಸಹ ಕಣಿವೆಯಲ್ಲಿ ಭೀತಿಯ ಜೀವನ ನಡೆಸಬೇಕಾಗುತ್ತದೆ. ಬಿಹಾರಿ ಕಾರ್ಮಿಕರ ಉದ್ದೇಶಿತ ಹತ್ಯೆಗಳೂ ಈ ಸಂಚಿನ ಭಾಗವಾಗಿಯೇ ಗೋಚರಿಸುತ್ತಿವೆ. ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕಿದ್ದರೆ ಅದನ್ನು ಬಿಹಾರಿಗಳಿಗೆ ಹಸ್ತಾಂತರಿಸುವುದು ಅಗತ್ಯವಾಗಿದೆ. ಅಲ್ಲಿ ಶಾಂತಿಯನ್ನು ಪುನಃಸ್ಥಾಪನೆ ಮಾಡಲು ನಾವು ಬದ್ದ ಎಂದವರು ತಿಳಿಸಿದರು.
ಸಚಿವರು, ಶಾಸಕರುಗಳು ಸರ್ಕಾರದ ದುಡ್ಡಲ್ಲೇ ಸಿನಿಮಾ ವೀಕ್ಷಿಸಿದ್ದಾರೆ. ಬಿಹಾರದಲ್ಲಿಯೂ ಈ ಚಿತ್ರಕ್ಕೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ಕೋರಿತ್ತು. ಆದರೆ, ಇಂತಹ ಚಿತ್ರಗಳಿಗೆ ತೆರಿಗೆ ವಿನಾಯಿತಿಯನ್ನು ನೀಡುವುದಿಲ್ಲ. ಇಂತಹವುಗಳಿಂದಾಗಿ ಭಯದ ವಾತಾವರಣ ನಿರ್ಮಾಣವಾಗುತ್ತದೆ ಎಂದವರು ಆತಂಕ ವ್ಯಕ್ತಪಡಿಸಿದರು.