ಚಂಡೀಗಢ, 03 (DaijiworldNews/DB): ಪಂಜಾಬಿ ಗಾಯಕ ಸಿಧು ಮೂಸೆವಾಲ ಹತ್ಯೆಯ ಹೊಣೆಯನ್ನು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಸೋದರಳಿಯ ಸಚಿನ್ ಬಿಷ್ಣೋಯ್ ಹೊತ್ತುಕೊಂಡಿದ್ದಾನೆ.
ಸಿಧು ಮೂಸೆವಾಲ ಹತ್ಯೆಯಲ್ಲಿ ತನ್ನ ಗ್ಯಾಂಗ್ನ ಪಾತ್ರವಿದೆ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣಾಧಿಕಾರಿಗಳ ಮುಂದೆ ಹೇಳಿದ್ದ. ಆದರೆ ಇದೀಗ ಆತನ ಸೋದರಳಿಯ ಈ ಹತ್ಯೆಯನ್ನು ತಾನೇ ಮಾಡಿರುವುದು ಎಂದಿದ್ದಾನೆ. ಪ್ರತೀಕಾರಕ್ಕಾಗಿ ಈ ಕೃತ್ಯೆಸಗಿದ್ದೇನೆ. ತನ್ನದೇ ಸ್ವಂತ ಕೈಗಳಿಂದ ಮೂಸೆವಾಲ ಹತ್ಯೆ ಮಾಡಿದ್ದೇನೆ ಎಂಬುದಾಗಿ ಸುದ್ದಿವಾಹಿನಿಗಳಿಗೆ ವರ್ಚ್ವಲ್ ಕರೆ ಮಾಡಿ ಆತ ತಿಳಿಸಿರುವುದಾಗಿ ವರದಿಯಾಗಿದೆ.
ಸಿಧು ಮೂಸೇವಾಲ ಅವರಿಗೆ ನೀಡಿದ್ದ ಭದ್ರತೆಯನ್ನು ಪಂಜಾಬ್ ಸರ್ಕಾರ ಹಿಂಪಡೆದ ಬೆನ್ನಲ್ಲೇ ಮೇ 29 ರಂದು ಮಾನ್ಸಾ ಬಳಿ ದುಷ್ಕರ್ಮಿಗಳಿಂದ ಸಿಧು ಹತ್ಯೆಗೀಡಾಗಿದ್ದರು. ಹತ್ಯೆಗೆ ಸಂಬಂಧಿಸಿಂತೆ ಲಾರೆನ್ಸ್ ಬಿಷ್ಣೋಯ್ ಸದ್ಯ ದೆಹಲಿಯ ವಿಶೇಷ ಪೊಲೀಸ್ ಘಟಕದ ವಶದಲ್ಲಿದ್ದಾನೆ. ಅಲ್ಲದೆ ಹತ್ಯೆಯಲ್ಲಿ ತನ್ನ ಗ್ಯಾಂಗ್ನ ಪಾತ್ರವಿದೆ ಎಂಬುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ. ಕಳೆದ ವರ್ಷ ನಡೆದಿದ್ದ ಅಕಾಲಿ ದಳ ಯುವ ಮುಖಂಡ ವಿಕ್ರಮ್ ಜಿತ್ ಸಿಂಗ್ ಆಲಿಯಾಸ್ ವಿಕಿ ಮುದುಕೇರಾ ಕೊಲೆಯಲ್ಲಿ ಮೂಸೆವಾಲ ಪಾತ್ರ ಇತ್ತು. ಹೀಗಾಗಿ ಕೆನಡಾ ಮೂಲದ ಗಾಲ್ಡಿ ಬ್ರಾರ್ ಮತ್ತು ತನ್ನ ಗ್ಯಾಂಗ್ ಸೇರಿ ದ್ವೇಷದಿಂದ ಈ ಕೃತ್ಯ ಎಸಗಲಾಗಿದೆ ಎಂದಿದ್ದ. ಇದೀಗ ಆತನ ಸೋದರಳಿಯ ಕೃತ್ಯವನ್ನು ತಾನೇ ಎಸಗಿದ್ದು ಎಂಬುದಾಗಿ ಹೇಳಿಕೊಂಡಿದ್ದಾನೆ.