ಬೆಂಗಳೂರು, 03 (DaijiworldNews/DB): ನವ ಸಂಕಲ್ಪ ಶಿಬಿರಕ್ಕೆ ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಕೈಕೊಟ್ಟಿದ್ದಾರೆ. ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಅಸಮಾಧಾನದ ಬೆಂಕಿ ಹತ್ತಿಕೊಂಡಿದೆ. ಈ ಬೆಂಕಿಯ ಕಾವಿನಿಂದ 2023 ಚುನಾವಣೆಯಲ್ಲಿ ಕಾಂಗ್ರೆಸ್ ಹೊತ್ತಿ ಉರಿದು, ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂಬುದಾಗಿ ಬಿಜೆಪಿ ಹೇಳಿದೆ.
ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಬಿಜೆಪಿ ಕರ್ನಾಟಕ, ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿಎಂ ಇಬ್ರಾಹಿಂ ಮಾತುಗಳನ್ನು ಕಾಂಗ್ರೆಸ್ ನಾಯಕರು ನಿರ್ಲಕ್ಷಿಸಿದರು. ಇಂದು ಅದೇ ಇಬ್ರಾಹಿಂ ಮಾತಿಗೆ ಬೆಲೆ ಕೊಡಲೇ ಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್ ಈಗ, ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಸೋಲಿಸುತ್ತದೋ ಅಥವಾ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷರ ಮಾತನ್ನು ತಿರಸ್ಕರಿಸುತ್ತದೋ? ಎಂದು ಪ್ರಶ್ನಿಸಿದೆ.
ಖರ್ಗೆ ಜೆಡಿಎಸ್ ಪಕ್ಷದ ಪರವಾಗಿ ವಕಾಲತ್ತು ಆರಂಭಿಸಿದಾಗಲೇ ಡಿಕೆ ಶಿವಕುಮಾರ್ ಮತ್ತು ಸಿದ್ಧರಾಮಯ್ಯ, ತಮ್ಮ ವೈಮನಸ್ಸು ಮರೆಯುವ ಮಾತುಗಳನ್ನಾಡುತ್ತಿದ್ದಾರೆ. ಅತಂತ್ರವಾದಲ್ಲಿ ಖರ್ಗೆ ಮುಖ್ಯಮಂತ್ರಿಯಾಗುವ ಭಯವೇ? ದಲಿತರನ್ನು ಕಟ್ಟಿ ಹಾಕಲು ಈಗಲೇ ರಣ ತಂತ್ರವೇ? ಎಂದು ಪ್ರಶ್ನೆ ಹಾಕಿದೆ.