ಬೆಂಗಳೂರು, ಜೂ 03 (DaijiworldNews/MS): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ತಿಪಟೂರಿನ ಮನೆ ಮುಂಭಾಗ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಚಡ್ಡಿ ಸುಟ್ಟರೆ ಮನೆಯನ್ನೇ ಸುಡಲು ಬಂದಿದ್ದರು ಎನ್ನುತ್ತಿರುವ ಬಿಜೆಪಿ ನಾಯಕರಿಗೆ ಚಡ್ಡಿಯೇ ಅವರ ಮನೆಯಂತಾಗಿದೆಯೇ?’ ಎಂದು ಪ್ರಶ್ನಿಸಿದೆ. ‘ಬೆಂಕಿ ಹಚ್ಚಲು ಬಂದಿದ್ದರು ಎಂಬ ಸುಳ್ಳುಗಳ ಮೂಲಕ ಎನ್ಎಸ್ಯುಐ ಕಾರ್ಯಕರ್ತರ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದರೆ ವಿದ್ಯಾರ್ಥಿ ಶಕ್ತಿಯ ಭಯ ಸರ್ಕಾರಕ್ಕೆ ತೀವ್ರವಾಗಿ ಕಾಡುತ್ತಿದೆ’ ಎಂದು ಆರೋಪಿಸಿದೆ.
ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಹಾಗೂ ಸಚಿವ ಬಿ.ಸಿ.ನಾಗೇಶ್ ಅವರು ಪಠ್ಯಪುಸ್ತಕದಲ್ಲಿ ಆರ್ಎಸ್ಎಸ್ ನೀತಿ ಅಳವಡಿಸುತ್ತಿದ್ದಾರೆ ಎಂದು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ’ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮನೆ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ತಿಪಟೂರಿನಲ್ಲಿ ಬುಧವಾರ ನಡೆದಿತ್ತು. ಈ ಘಟನೆಯ ಬೆನ್ನಲ್ಲೇ 15 ಜನರನ್ನ ಎರಡು ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದರು.
ಈ ಘಟನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಹಿತ ಹಲವು ಬಿಜೆಪಿ ಮುಖಂಡರು ತೀವ್ರವಾಗಿ ಖಂಡಿಸಿದ್ದರು.