ಹೈದರಾಬಾದ್, 03 (DaijiworldNews/DB): ಹದಿಹರೆಯದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿಗಳ ಪುತ್ರರು ಸೇರಿದಂತೆ ಐವರ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹೈದರಾಬಾದ್ ಜುಬಿಲಿ ಹಿಲ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 28ರಂದು ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಈ ಕುರಿತು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿತ್ತು. ದೂರಿನ ಮೇರೆಗೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಇದೀಗ ಐವರು ಆರೋಪಿಗಳ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ಮತ್ತು 323 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 9 ಅನ್ನು ಪೋಕ್ಸೋ ಕಾಯಿದೆಯ 10 ರೊಂದಿಗೆ ಈ ಪ್ರಕರಣದಲ್ಲಿ ಸೇರಿಸಲಾಗಿದೆ. ಆರೋಪಿಗಳ ಪೈಕಿ ಪ್ರಭಾವಿಗಳ ಮಕ್ಕಳೂ ಸೇರಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ ವಲಯ) ಜೋಯಲ್ ಡೇವಿಸ್ ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ಆರೋಪಿಗಳನ್ನು ಗುರುತಿಸುವ ಸ್ಥಿತಿಯಲ್ಲಿಲ್ಲದ ಕಾರಣ ನಾವು ತಾಂತ್ರಿಕ ವಿವರಗಳನ್ನು ಕಲೆ ಹಾಕಿ ಆರೋಪಿಗಳ ಪತ್ತೆಗೆ ಮುಂದಾಗಿದ್ದೇವೆ. ಆರೋಪಿಗಳು ಬಾಲಾಪರಾಧಿಗಳೆಂಬ ಮಾಹಿತಿ ಲಭ್ಯವಾಗಿದೆ. ಬಾಲಕಿ ಜೂಬಿಲಿ ಹಿಲ್ಸ್ನ ಪಬ್ನಲ್ಲಿ ಸ್ನೇಹಿತರು ಆಯೋಜಿಸಿದ್ದ ಪಾರ್ಟಿಗೆ ಹೋಗಿದ್ದಳು. ಸಂಜೆ 5.30ರ ಸುಮಾರಿಗೆ ಕೆಲವು ವ್ಯಕ್ತಿಗಳು ಆಕೆಯನ್ನು ಕಾರಿನಲ್ಲಿ ಬೇರೆಡೆ ಕರೆದೊಯ್ದು ಅನುಚಿತ ವರ್ತನೆ ತೋರಿದ್ದರು. ಬಳಿಕ ಆಕೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿದ್ದಾರೆ. ಕುತ್ತಿಗೆಯಲ್ಲಿ ಪರಚಿತ ಗಾಯವಾಗಿದ್ದು, ಬಾಲಕಿ ಆಘಾತಕ್ಕೆ ಒಳಗಾಗಿದ್ದಳು ಎಂದು ಆಕೆಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಇದೀಗ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು. ಶಾಸಕರೊಬ್ಬರ ಪುತ್ರನೂ ಇದರಲ್ಲಿ ಆರೋಪಿಯಾಗಿದ್ದು, ಈತನ ಜೊತೆ ಪರಾರಿಯಾಗಿದ್ದವರಿಗೆ ಹುಟುಕಾಟ ನಡೆಸುವ ವೇಳೆ ಸೂರಜ್ ಮತ್ತು ಆದಿ ಎಂಬ ಇಬ್ಬರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.