ಪಣಜಿ, 03 (DaijiworldNews/DB): ಕೇಂದ್ರದ ಬಿಜೆಪಿ ಸರ್ಕಾರವು ಕಳೆದ ಎಂಟು ವರ್ಷಗಳಲ್ಲಿ ದೇಶದ ಜನತೆಯನ್ನು ದಿಕ್ಕು ತಪ್ಪಿಸುತ್ತಿದೆ. ಇದರ ಬಗ್ಗೆ ವಿಸ್ತ್ರತ ಚರ್ಚೆ ನಡೆಸಿ ಜನರಿಗೆ ತಲುಪಿಸುವ ನಿರ್ಣಯವನ್ನು ಕಾಂಗ್ರೆಸ್ ತೆಗೆದುಕೊಂಡಿದೆ ಎಂದು ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಪಣಜಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜನರಿಗೆ ನೀಡಿದ ಭರವಸೆ ಈಡೇರಿಸಲು ಕೇಂದ್ರ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಯೋಜನೆಗಳ ಆಮಿಷ ಒಡ್ಡಿ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಇದನ್ನೆಲ್ಲಾ ಜನರ ಮುಂದಿಡುವ ಕೆಲಸವನ್ನು ಕಾಂಗ್ರೆಸ್ ಮಾಡಲಿದೆ ಎಂದರು.
ಗೋವಾದಲ್ಲಿ ಬಿಜೆಪಿ ಶಾಸಕರ ಸಂಖ್ಯೆ30 ಕ್ಕೆ ಏರಿಕೆಯಾಗಲಿದೆ ಎಂಬ ಬಿಜೆಪಿ ಗೋವಾ ಉಸ್ತುವಾರಿ ಸಿ.ಟಿ ರವಿ ಹೇಳಿಕೆಯಲ್ಲಿ ಯಾವುದೇ ಸತ್ಯಾಂಶವಿಲ್ಲ. ರಾಜಕೀಯದಲ್ಲಿ ಇಂತಹ ಹೇಳಿಕೆ ಸಾಮಾನ್ಯ. ಕಾಂಗ್ರೆಸ್ನ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸ ನನಿಗದೆ. ಹೀಗಾಗಿ ಸಿ.ಟಿ. ರವಿ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನಿಗದಿತ ಸಮಯದಲ್ಲೇ ಪಂಚಾಯತ್ ಚುನಾವಣೆ ನಡೆಸಲು ಗೋವಾ ಸರ್ಕಾರಕ್ಕೆ ಇಷ್ಟವಿಲ್ಲದ ಕಾರಣ ಒಬಿಸಿ ಸರ್ವೆ ಕಾರಣ ಮುಂದಿಟ್ಟು ಚುನಾವಣೆಯನ್ನು ಮುಂದಕ್ಕೆ ಹಾಕುವ ಪ್ರಯತ್ನದಲ್ಲಿದೆ. ಆದರೆ ಚುನಾವಣಾ ಆಯೋಗ ಶೀಘ್ರ ಪಂಚಾಯತ್ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ ಅವರು, ಪ್ರತಿಪಕ್ಷದ ಧ್ವನಿಯನ್ನು ಹತ್ತಿಕ್ಕಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.