ಮಾನ್ಸಾ (ಪಂಜಾಬ್), 03 (DaijiworldNews/DB): ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪಂಜಾಬ್ ಗಾಯಕ ಸಿಧು ಮೂಸೇವಾಲ ಅವರ ಮನೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಸಿಎಂ ಭೇಟಿ ವೇಳೆ ಮೂಸೆವಾಲ ಮನೆ ಮುಂಭಾಗ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ಜನರು ಮಾನ್ಸಾದಲ್ಲಿ ಪಂಜಾಬ್ ಪೊಲೀಸರ ವಿರುದ್ದ ಪ್ರತಿಭಟನೆ ನಡೆಸಿದರು. ಹೀಗಾಗಿ ಗ್ರಾಮಕ್ಕೆ ಯಾರೂ ತೆರಳದಂತೆ ಪೊಲೀಸರು ಭದ್ರತೆಯನ್ನು ಮತ್ತಷ್ಟು ಬಿಗುಗೊಳಿಸಿದ್ದಾರೆ. ಮಾನ್ ಭೇಟಿ ಬೆನ್ನಲ್ಲೇ ಆಪ್ ಶಾಸಕ ಗುರುಪ್ರೀತ್ ಸಿಂಗ್ ಅವರೂ ಮೂಸೇವಾಲ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಸಿಂಗ್ ಅವರೂ ಪ್ರತಿಭಟನಾಕಾರರನ್ನು ಎದುರಿಸಬೇಕಾಗಿ ಬಂತು. ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದರು. ಗ್ರಾಮಕ್ಕೆ ಹೋಗದಂತೆ ನಮ್ಮನ್ನು ತಡೆಹಿಡಿಯಲಾಗುತ್ತದೆ. ನಮ್ಮ ಸಂಬಂಧಿಕರನ್ನೂ ಬಿಡುತ್ತಿಲ್ಲ ಎಂಬುದಾಗಿ ಗ್ರಾಮಸ್ಥರೊಬ್ಬರು ಅಳಲು ತೋಡಿಕೊಂಡಿದ್ದಾರೆ. ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ.
28 ವರ್ಷದ ಸಿಧು ಮೂಸೇವಾಲ ಅವರು ಪಂಜಾಬ್ನ ಪ್ರಖ್ಯಾತ ಗಾಯಕರಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ, ಪಂಜಾಬ್ನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಮೇ 28ರಂದು ಸರ್ಕಾರವು ಸಿಧು ಮೂಸೆವಾಲ ಅವರಿಗೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಂಡಿತ್ತು. ಇದಾದ ಮರುದಿನವೇ ಅವರು ಮೇ 29ರಂದು ದುಷ್ಕರ್ಮಿಗಳ ಗುಂಡಿನ ದಾಳಿಗೊಳಗಾಗಿ ಮೃತಪಟ್ಟಿದ್ದರು.