ಬೆಂಗಳೂರು, ಜೂ 03 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರ ದುರಾಡಳಿತವು ಭಾರತದ ಆರ್ಥಿಕತೆಯನ್ನು ನೆಲ ಕಚ್ಚುವಂತೆ ಮಾಡಿದ್ದು, ಇದೇ ಅವರ ಎಂಟು ವರ್ಷಗಳ ಸಾಧನೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಆಗಿದ್ದು 8 ವರ್ಷ ಆಗಿದೆ. ಆದರೆ ದೇಶದ ಅಭಿವೃದ್ಧಿ ಮಾತ್ರ 20 ವರ್ಷ ಹಿಂದಕ್ಕೆ ಕುಸಿದಿದೆ. ದೇಶ ವಿಶ್ವಗುರುವಾಗುವ ಬದಲು ಪಾತಾಳದತ್ತ ಕುಸಿಯುತ್ತಿದೆ. ಇದನ್ನು ನಾನು ಸೃಷ್ಟಿಸಿಕೊಂಡು ಹೇಳುತ್ತಿಲ್ಲ. ಸರ್ಕಾರದ ದಾಖಲೆಗಳೇ ಹೇಳುತ್ತಿವೆ ಎಂದರು.
ಇನ್ನು ಬೆಲೆ ಏರಿಕೆ ಹಿಂದೆಂದೂ ಇಲ್ಲದ ಮಟ್ಟಕ್ಕೆ ಮುಟ್ಟಿದ್ದು, ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರಗತಿಗೆ ಮುಟ್ಟಿದೆ. ರಾಜ್ಯಗಳ ಆರ್ಥಿಕತೆ ಕುಸಿದು ಹೋಗುತ್ತಿದೆ ಎಂದಿದ್ದಾರೆ.
ದೇಶದಲ್ಲಿ ನಿರುದ್ಯೋಗ ಕೂಡ ಹೆಚ್ಚಾಗಿದ್ದು, ಯುವಕರು ಜೀವನ ಸಾಗಿಸುವುದು ಕಷ್ಟಕರವಾಗಿದೆ. ಇದರ ಜೊತೆಯಲ್ಲಿ ದೇಶದ ಪ್ರಜಾತಾಂತ್ರಿಕೆಯೂ ಭಯಭೀತವಾಗಿದೆ ಎಂದು ಹೇಳಿದ್ದಾರೆ.