ಬೆಂಗಳೂರು, ಜೂ. 03 (DaijiworldNews/DB): ಭಾರತೀಯ ಯುವ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಯುವ ಕಾಂಗ್ರೆಸ್ ಮುಖಂಡ ಎಂ.ಎಸ್. ರಕ್ಷಾ ರಾಮಯ್ಯ ಅವರನ್ನು ನೇಮಕ ಮಾಡಲಾಗಿದೆ.
ರಕ್ಷಾ ರಾಮಯ್ಯ ಅವರು ಭಾರತೀಯ ಯುವ ಕಾಂಗ್ರೆಸ್ಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಭಡ್ತಿ ನೀಡಲಾಗುತ್ತಿದೆ. ನೇಮಕಾತಿಯು ತತ್ಕ್ಷಣ ಜಾರಿಗೆ ಬರಲಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹೇಳಿದ್ದಾರೆ.
ಪಕ್ಷ ಸಂಘಟನೆಗಾಗಿ ಪೂರ್ಣ ಸಮಯ ಮತ್ತು ಶಕ್ತಿಯನ್ನು ಉಪಯೋಗಿಸುವುದರೊಂದಿಗೆ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಕ್ರಿಯಾಶೀಲ ನಾಯಕತ್ವದಲ್ಲಿ ಪಕ್ಷ ಬಲವರ್ಧನೆಯಲ್ಲಿ ಸದಾ ನಮ್ಮೊಂದಿಗೆ ಶ್ರಮಿಸುತ್ತೀರಿ ಎಂಬ ನಂಬಿಕೆಯನ್ನು ಹೊಂದಿದ್ದೇವೆ ಎಂದು ಅವರು ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.
ಹೊಸ ಜವಾಬ್ದಾರಿಯು ಕುರಿತು ಪ್ರತಿಕ್ರಿಯಿಸಿದ ರಕ್ಷಾ ರಾಮಯ್ಯ, ಪಕ್ಷ ನೀಡಿದ ಜವಾಬ್ದಾರಿಯನ್ನು ಸ್ವೀಕರಿಸಲು ಖುಷಿಯಾಗುತ್ತಿದೆ. ರಾಷ್ಟ್ರಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಸಂಘಟಿತನಾಗಿ ಶ್ರಮಿಸುತ್ತೇನೆ. ಉದಯಪುರದಲ್ಲಿ ನಡೆದ ಕಾಂಗ್ರೆಸ್ ಚಿಂತನಾ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನಕ್ಕೆ ನನ್ನೆಲ್ಲಾ ಶ್ರಮ ಹಾಕಿ ಕೆಲಸ ಮಾಡುತ್ತೇನೆ. ಯುವ ಕಾಂಗ್ರೆಸ್ ಬಲವರ್ಧನೆ ಮತ್ತು ಯುವಕರ ಧ್ವನಿಯಾಗಿ ಪಕ್ಷನಿಷ್ಠನಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.