ಮುಂಬೈ, ಜೂ 03 (DaijiworldNews/MS): ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಮತ್ತು ಈ ಬಗ್ಗೆ ಹೊಸ ವಿವಾದಗಳನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಆರ್.ಎಸ್.ಎಸ್. ಮುಖ್ಯಸ್ಥರಾದ ಮೋಹನ್ ಭಾಗವತ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.
ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ಸಮಸ್ಯೆಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಭಾಗವತ್ ಗುರುವಾರ ಜ್ಞಾನವಾಪಿ ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರು ಗುರುವಾರ ಆರ್.ಎಸ್.ಎಸ್. ನ ಮೂರನೇ ಅಧಿಕಾರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ವಾರಾಣಾಸಿಯಲ್ಲಿ ಜ್ಞಾನವಾಪಿ ಮಸೀದಿಯ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇತಿಹಾಸವನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಈಗಿನ ಹಿಂದೂಗಳಾಗಲೀ ಅಥವಾ ಮುಸ್ಲಿಂರಾಗಲೀ ಹೊಸದಾಗಿ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜಗಳವನ್ನು ಏಕೆ ಹೆಚ್ಚಿಸಬೇಕು? ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಏಕೆ ಹುಡುಕಬೇಕು? ಎಂದು ಪ್ರಶ್ನಿಸಿದ ಅವರು ನವೆಂಬರ್ 9 ರಂದು, ನಾವು ಐತಿಹಾಸಿಕ ಕಾರಣಗಳಿಗಾಗಿ, ನಾವು ರಾಮ ಜನ್ಮಭೂಮಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದೇವೆ ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದೇವೆ. ಈಗ, ನಾವು ಯಾವುದೇ ಮಂದಿರ ಅಂದೋಲನ ಮುನ್ನಡೆಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ
ಈ ಹಿಂದೆ ಮುಸ್ಲಿಂರು ಆಕ್ರಮಣಕಾರರಾಗಿ ಭಾರತಕ್ಕೆ ಬಂದ ಸಂದರ್ಭದಲ್ಲಿ ಇವೆಲ್ಲವೂ ಸಂಭವಿಸಿದ್ದವು. ಈ ಆಕ್ರಮಣಕಾರರು ಸ್ವಾತಂತ್ರ್ಯ ಬಯಸಿದ್ದ ಭಾರತೀಯರ ಆತ್ಮಸ್ಥೈರ್ಯವನ್ನು ಕುಂದಿಸುವ ಸಲುವಾಗಿ ದೇವಾಲಯಗಳನ್ನು ಧ್ವಂಸಗೊಳಿಸಿದ್ದರು. ಹೀಗೆ ಧ್ವಂಸಗೊಂಡ ಸಾವಿರಾರು ದೇವಾಲಯಗಳು ನಮ್ಮ ದೇಶದಲ್ಲಿವೆ. ಈ ಬಗ್ಗೆ ಆರ್.ಎಸ್.ಎಸ್. ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ
ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಮಸೀದಿಯಲ್ಲೂ ಶಿವಲಿಂಗವನ್ನು ಹುಡುಕುವ ಪ್ರಯತ್ನವನ್ನು ಕೈಬಿಡಬೇಕೆಂದು ಮಂದಿರಕ್ಕಾಗಿ ಅಂದೋಲನ ಕೈ ಬಿಡಬೇಕು ಎಂದು ಅವರು ಕರೆ ನೀಡಿದ್ದಾರೆ.