ಬೆಂಗಳೂರು, ಜೂ 02 (DaijiworldNews/HR): ಸಿದ್ದರಾಮಯ್ಯ ಅವರ ಸಿದ್ಧಾಂತ ಯಾವುದು, ಮಜಾವಾದವೋ, ಸಮಾಜವಾದವೋ? ಯಾವ ಸೈದ್ಧಾಂತಿಕ ಬದ್ಧತೆಯೂ ಇಲ್ಲದೇ ಎಲ್ಲರ ಮೇಲೂ ಎರಗುವ, ಎಲ್ಲರನ್ನೂ ಕಬಳಿಸುವ ಸಿದ್ಧರಾಮಯ್ಯ ಅವರ ರಾಜಕೀಯ ಬೆಳವಣಿಗೆಯನ್ನು ಅನಾವರಣಗೊಳಿಸಲಿದು ಸಕಾಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಜನತಾ ಪರಿವಾರದಲ್ಲಿರುವ ಸಿದ್ಧರಾಮಯ್ಯ ಅವರ ಆಪ್ತರನ್ನು ತುಸು ವಿಚಾರಿಸಿದರೆ ಮೈಸೂರು ಜಲದರ್ಶಿನಿಯ ಕಲ್ಯಾಣಲೀಲೆಗಳು ಹೊರಬೀಳುತ್ತವೆ. ಪಕ್ಷದ ಚೌಕಟ್ಟಿನಲ್ಲಿ ಯಾವ ಹೋರಾಟವನ್ನೂ ರೂಪಿಸದ ಸಿದ್ದರಾಮಯ್ಯ ಹುತ್ತದಲ್ಲಿ ಸೇರುವ ಹಾವು, ಅಷ್ಟೇ ಎಂದಿದೆ.
ನಂಜುಂಡಸ್ವಾಮಿಯ ಶಿಷ್ಯ ಎಂದು ಬಡಾಯಿ ಕೊಚ್ಚಿಕೊಳ್ಳುವ #ಮಜವಾದಿಸಿದ್ದರಾಮಯ್ಯ ಅವರೇ, ನೀವು ಎಂದಾದರೂ ರೈತರಿಗೆ ನ್ಯಾಯ ಕೊಡಿಸಿದ್ದೀರಾ? ಸಿಎಂ ಆಗಿದ್ದಾಗ, ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಕುಡಿದ ಸತ್ತ ಎಂದು ನಿಂದಿಸಿರಲಿಲ್ಲವೇ? ನಂಜುಂಡಸ್ವಾಮಿ ಆ ಕ್ಷಣದಲ್ಲಿ ಬದುಕಿರುತ್ತಿದ್ದರೆ ಹಸಿರುಶಾಲಿನಲ್ಲೇ ನಿಮಗೆ ಕಪಾಳಮೋಕ್ಷ ಮಾಡಿರುತ್ತಿದ್ದರು ಎಂದು ಹೇಳಿದೆ.
ಇನ್ನು ನಾನು ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡೀಸ್ ಶಿಷ್ಯ ಎಂದೂ #ಮಜವಾದಿಸಿದ್ದರಾಮಯ್ಯ ಹೇಳುತ್ತಿರುತ್ತಾರೆ. ಕಾರ್ಮಿಕರ ಕಲ್ಯಾಣಕ್ಕೆ ಹೋರಾಟ ಮಾಡಿದ ಒಂದಾದರೂ ಉದಾಹರಣೆ ಇದೆಯೇ? ಮಹಿಷಿ ವರದಿಯನ್ವಯ ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸಲು ಅಧಿಕಾರದಲ್ಲಿದ್ದಾಗ ಮಾಡಿದ್ದೇನು? ಸಿದ್ದರಾಮಯ್ಯ ಅವರದ್ದು ಬಂಡವಾಳ ಇಲ್ಲದ ಶೂನ್ಯಬಡ್ಡಿ ಭಾಷಣ ಎಂದು ವಾಗ್ದಾಳಿ ನಡೆಸಿದೆ.
ದೇವೇಗೌಡ ಅವರು ಸಿದ್ದರಾಮಯ್ಯ ಅವರ ರಾಜಕೀಯ ಏಳಿಗೆಯ ನಿಜವಾದ ಗುರು. ಆದರೆ ಸಿದ್ಧರಾಮಯ್ಯ ಅವರು ದೇವೇಗೌಡರಿಗೆ ಮಾಡಿದ್ದೇನು? ಒಂದಿಷ್ಟು ಜನ 'ರಾತ್ರಿ ಗೆಳೆಯರ' ಜೊತೆ ಗುಂಪುಕಟ್ಟಿಕೊಂಡು ಉಂಡ ಮನೆಗೆ ಬೆಂಕಿ ಹಚ್ಚುವ ಯೋಜನೆ ರೂಪಿಸಿದ್ದು ನಿಜವಲ್ವೇ? ಈಗ ಕಾಂಗ್ರೆಸ್ ಪಕ್ಷದಲ್ಲೂ ನಡೆಸುತ್ತಿರುವುದು ಅದನ್ನೇ ಅಲ್ಲವೇ? ಎಂದು ಪ್ರಶ್ನಿಸಿದೆ.