ಬೆಂಗಳೂರು, ಜೂ 02 (DaijiworldNews/HR): ಜ್ಞಾನಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಯುವಕನೊಬ್ಬ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ 'ಸ್ವಾರಿ' ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತನನ್ನು ಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ ವಿದ್ಯಾರ್ಥಿ ಮನೋಜ್ ಎಂದು ಗುರುತುಸಲಾಗಿದೆ.
ಮನೋಜ್ ಬುಧವಾರದಂದು ರಾತ್ರಿ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಅಲ್ಲದೇ 'Sorry, chill we all die' ಎಂದು ಬರೆದುಕೊಂಡಿದ್ದು, ಬಳಿಕ ಮನೆಯಲ್ಲಿದ್ದ ಫ್ಯಾನಿಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಮನೋಜ್ ಮನೆ ಪಕ್ಕದಲ್ಲೇ ಅಜ್ಜಿ ಮನೆ ಇದ್ದು, ಪ್ರತಿ ದಿನ ಅಜ್ಜಿಯ ಮನೆಗೆ ಹೋಗಿ ಮನೋಜ್ ಮಲಗುತ್ತಿದ್ದ. ಎಂದಿನಂತೆ ಬುಧವಾರ ರಾತ್ರಿ ಕೂಡ ಊಟ ಮುಗಿಸಿ ಮಲಗಲು ಅಜ್ಜಿ ಮನೆಗೆ ಹೋಗಿದ್ದ. ಇಂದು ಬೆಳಗ್ಗೆ 7.30 ಆದರೂ ಮನೋಜ್ ರೂಮಿನಿಂದ ಹೊರ ಬಂದಿರಲಿಲ್ಲ. ಬಳಿಕ ಅನುಮಾನಗೊಂಡ ಪೋಷಕರು ಬಾಗಿಲು ಒಡೆದು ಒಳ ಹೋದಾಗ ಮನೋಜ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.