ನವದೆಹಲಿ, ಜೂ 02 (DaijiworldNews/MS): ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರನ್ನು "ಸುಳ್ಳು" ಪ್ರಕರಣದಲ್ಲಿ ಬಂಧಿಸಿದಂತೆ ಶೀಘ್ರದಲ್ಲೇ ತಮ್ಮ ಸರ್ಕಾರದ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಆರೋಪಿಸಿದ್ದಾರೆ.
ಆರೋಗ್ಯ, ಮತ್ತು ಗೃಹ ಖಾತೆಗಳನ್ನು ಹೊಂದಿರುವ ಸತ್ಯೇಂದ್ರ ಜೈನ್ ಅವರನ್ನು ಹಣ ವರ್ಗಾವಣೆ ಸಂಬಂಧಿತ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸೋಮವಾರ ಬಂಧಿಸಿತ್ತು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸತ್ಯೇಂದ್ರ ಜೈನ್ ಅವರನ್ನು ಸುಳ್ಳು ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬಂಧಿಸಲಿದ್ದಾರೆ ಎಂದು ಕೆಲವು ತಿಂಗಳ ಹಿಂದೆಯೇ ನನಗೆ ವಿಶ್ವಾಸಾರ್ಹ ಮೂಲಗಳಿಂದ ವಿಷಯ ತಿಳಿದುಬಂದಿತ್ತು. ಇದೀಗ ಮತ್ತೊಂದು ಸುಳ್ಳು ಪ್ರಕರಣದಲ್ಲಿ ಮನೀಷ್ ಸಿಸೋಡಿಯಾ ಅವರನ್ನು ಮುಂದಿನ ದಿನಗಳಲ್ಲಿ ಬಂಧಿಸಬಹುದು ಎಂದು ಅದೇ ಮೂಲಗಳಿಂದ ನನಗೆ ಮಾಹಿತಿ ಸಿಕ್ಕಿದೆ’ ಎಂದು ಹೇಳಿದ್ದಾರೆ.
ಸಿಸೋಡಿಯಾ ಅವರನ್ನು ಕೇಜ್ರಿವಾಲ್ "ದೆಹಲಿಯಲ್ಲಿ ಶಿಕ್ಷಣ ಚಳುವಳಿಯ ಪಿತಾಮಹ" ಮತ್ತು ಸ್ವತಂತ್ರ ಭಾರತದ ಅತ್ಯುತ್ತಮ ಶಿಕ್ಷಣ ಮಂತ್ರಿ ಎಂದು ಬಣ್ಣಿಸಿದ್ದು , ಅವರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯವನ್ನು ಸುಧಾರಿಸಲು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರದ (ಎಎಪಿ) ಎಲ್ಲಾ ಶಾಸಕರನ್ನು ಒಂದೇ ಬಾರಿಗೆ ಬಂಧಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತೇನೆ. ಒಬ್ಬೊಬ್ಬರನ್ನು ಬಂಧಿಸುವುದರಿಂದ ಅಭಿವೃದ್ಧಿ ಕೆಲಸಗಳಿಗೆ ಅಡಚಣೆ ಉಂಟಾಗುತ್ತದೆ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.