ಗಾಂಧಿನಗರ, ಜೂ 02 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನಾನು ಸಣ್ಣ ಸೈನಿಕನಂತೆ ದೇಶಸೇವೆ ಮಾಡುತ್ತೇನೆ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗುತ್ತಿರುವ ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರ, ರಾಜ್ಯ, ಸಾರ್ವಜನಿಕ ಮತ್ತು ಸಾಮಾಜಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಇಂದಿನಿಂದ ನಾನು ಹೊಸ ಅಧ್ಯಾಯ ಆರಂಭಿಸಲಿದ್ದೇನೆ. ದೇಶಸೇವೆ ಮಾಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಸಣ್ಣ ಸೈನಿಕನಂತೆ ಉತ್ತಮ ಕೆಲಸ ಮಾಡಿಕೊಂಡು ಹೋಗುತ್ತೇನೆ ಎಂದಿದ್ದಾರೆ.
ಇನ್ನು ಇಂದು ಬೆಳಗ್ಗೆ ಬಿಜೆಪಿ ಸೇರ್ಪಡೆಗೆ ಮುನ್ನ ಅಹಮದಾಬಾದ್ ನ ತಮ್ಮ ನಿವಾಸದಲ್ಲಿ ಹಾರ್ದಿಕ್ ಪಟೇಲ್ ಪೂಜೆ ಸಲ್ಲಿಸಿದ್ದಾರೆ.