ಶ್ರೀನಗರ, ಜೂ 02 (DaijiworldNews/MS): ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಯೋಜನೆಯಡಿ ಉದ್ಯೋಗದಲ್ಲಿರುವ ಕಾಶ್ಮೀರಿ ಉದ್ಯೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲು ನಿರ್ಧರಿಸಿದ್ದು ಜೂ.6ರ ಒಳಗಾಗಿ ಈ ಪ್ರಕ್ರಿಯೆ ಮುಕ್ತಾಯಗೊಳಿಸಲು ನಿರ್ಧರಿಸಿದೆ.
ಹಿಂದೂ ಶಾಲೆಯ ಶಿಕ್ಷಕನ ಮೇಲೆ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆ ಬೆದರಿಕೆ ಹಾಕಿದ ನಂತರ, ಜಿಲ್ಲಾಡಳಿತವು ಅವರನ್ನು ಕಾಶ್ಮೀರ ಕಣಿವೆಯೊಳಗೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸಕ್ಕೆ ಮುಂದಾಗಿದೆ. ದುರ್ಗಮ ಮತ್ತು ಸಂಪರ್ಕಕ್ಕೆ ಸಿಗ್ದ ಪ್ರದೇಶಗಳಲ್ಲಿ ಉದ್ಯೋಗಿಗಳು ಕೆಲಸ ಮಾಡದಂತೆಯೂ ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕಾಶ್ಮೀರಿ ಪಂಡಿತರು, ಹಿಂದೂ ಶಿಕ್ಷಕ ಮತ್ತು ಮೂವರು ಪೊಲೀಸರು ಸೇರಿದಂತೆ ಕಳೆದ ತಿಂಗಳು ಏಳು ಜನರ ಉದ್ದೇಶಿತ ಹತ್ಯೆಗಳ ಕುರಿತು ಚರ್ಚಿಸಲು ನಿನ್ನೆ ಉನ್ನತ ಮಟ್ಟದ ಸರಣಿ ಭದ್ರತಾ ಸಭೆ ನಡೆಸಿದ್ದು ಅಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ಸಮೀಪಿಸುತ್ತಿರುವ ಕಾರಣ, ಸದ್ಯದಲ್ಲಿ ಭಯೋತ್ಪಾದಕ ದಾಳಿಗಳು ಪುನರಾವರ್ತನೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನೊಂದೆಡೆ ಶಿಕ್ಷಕಿ ರಜನಿ ಬಾಲಾ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿದ್ದು ಪ್ರಧಾನಮಂತ್ರಿ ಉದ್ಯೋಗ ಖಾತ್ರಿ ಯೋಜನೆಯ ಕಾಶ್ಮೀರಿ ಪಂಡಿತ ಫಲಾನುಭವಿಗಳು ಮತ್ತು ಕಾಶ್ಮೀರದಲ್ಲಿ ನಿಯೋಜಿಸಲಾದ ಜಮ್ಮುವಿನ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗಿಗಳು ತಮ್ಮನ್ನು ಸ್ಥಳಾಂತರಿಸಬೇಕು ಎಂದು ಆಗ್ರಹಿದ್ದಾರೆ.