ಬೆಂಗಳೂರು, ಜೂ 01 (DaijiworldNews/DB): ನಾನು ಮತ್ತುಅನಂತರಾಜು ಆರು ವರ್ಷದಿಂದ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದೆವೇ ಹೊರತು ಅವರಿಗೆ ನಾನು ಹನಿಟ್ಯ್ರಾಪ್ ಮಾಡಿಲ್ಲ. ನಾನು ಅವರಿಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿಲ್ಲ ಎಂದು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಿಜೆಪಿ ಮುಖಂಡ ಬಿ.ಪಿ. ಅನಂತರಾಜು ಅವರ ಪ್ರೇಯಸಿ ರೇಖಾ ಕಣ್ಣೀರಿಟ್ಟಿದ್ದಾರೆ.
ಬ್ಯಾಡರಹಳ್ಳಿ ಪೊಲೀಸ್ ಠಾಣೆ ಮುಂಭಾಗ ಬುಧವಾರ ಬೆಳಗ್ಗೆ ಆಗಮಿಸಿ, ಸುಮಾ ನೀಡಿದ ಟಾರ್ಚರ್ನಿಂದಾಗಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ತಪ್ಪು ಮಾಡಿದ್ದೇನೆ. ಆದರೆ ಅವರ ಸಾವಿಗೆ ಕಾರಣಳಲ್ಲ. ನನಗೆ ನ್ಯಾಯ ಕೊಡಿಸಿ ಎಂದು ಗೋಗರೆದರು.
ನನ್ನಲ್ಲಿ ಇರುವ ಎಲ್ಲಾ ಆಡಿಯೋಗಳನ್ನೂ ಪೊಲೀಸರಿಗೆ ನೀಡಿದ್ದೇನೆ. ನನಗೆ ಹಾಗೂ ನನ್ನ ಮಕ್ಕಳಿಗೆ ಜೀವ ಬೆದರಿಕೆ ಇದೆ. ಅವರ ಆತ್ಮಹತ್ಯೆ ನನಗೆದುಃಖ ತಂದಿದೆ. ಹಣಕ್ಕಾಗಿ ನಾನು ಅವರಲ್ಲಿ ಬೇಡಿಕೆ ಇಟ್ಟಿಲ್ಲ. ಈ ಹಿಂದೆಯೂ ಅವರು ಒಂದೆರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆಗ ಸುಮಾ ಬಲವಂತವಾಗಿ ಅವರಿಂದ ಡೆತ್ನೋಟ್ ಬರೆಸಿಕೊಂಡಿದ್ದಾರೆ. ಸುಮಾಳ ಕಿರುಕುಳದಿಂದಲೇ ಘಟನೆ ನಡೆದಿದೆ ಎಂದಿದ್ದಾರೆ.
ನಾನು ಯಾವುದೇ ತನಿಖೆಗೆ ಸಿದ್ದ. ಆದರೆ ಸುಮಾ ವಿರುದ್ದ ದೂರು ದಾಖಲಿಸುತ್ತೇನೆ. ಮುಖ್ಯಮಂತ್ರಿ ಮತ್ತು ಗೃಹ ಸಚಿವರು ನನಗೆ ನ್ಯಾಯ ಕೊಡಿಸಬೇಕು ಎಂದವರು ಇದೇ ವೇಳೆ ಮನವಿ ಮಾಡಿದ್ದಾರೆ.
ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಂತರಾಜು ಮೇ 12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ಸಂಬಂಧ ಅವರ ಪ್ರೇಯಸಿ ರೇಖಾ ಆರೋಪಿ ಸ್ಥಾನದಲ್ಲಿದ್ದಾರೆ.