ಬೆಂಗಳೂರು, ಜೂ 01 (DaijiworldNews/MS): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ED ಈಗ HD ಕಿರುಕುಳ ನಿರ್ದೇಶನಾಲಯ (Harassment Directorate) ಆಗಿದೆ ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, " ಶ್ರೀಮತಿ ಸೋನಿಯಾಗಾಂಧಿ, ಶ್ರೀ ರಾಹುಲ್ ಗಾಂಧಿ ಅವರಿಗೆ ED ಸಮನ್ಸ್ ನೀಡಿರುವುದು ಬಿಜೆಪಿ ಸರ್ಕಾರದ ಸೇಡಿನ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ? ಈ ಸೇಡಿನ ರಾಜಕೀಯ ಸೋನಿಯಾ ಅವರ ವಿರುದ್ಧ ಅಷ್ಟೇ ಅಲ್ಲ ಕಾಂಗ್ರೆಸ್ ಬೆಂಬಲಿಸುವ ಸಾಮಾನ್ಯರ ವಿರುದ್ಧವೂ ಹೌದು. ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ED ಈಗ HD (Harassment Directorate) ಆಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆರ್ಥಿಕ ನೀತಿಗಳು ವಿಫಲಗೊಂಡ ನಂತರ INC ನಾಯಕತ್ವವನ್ನು ಹತ್ತಿಕ್ಕುವ ಬಿಜೆಪಿ ಕನಸಿಗೆ ಆಯ್ಕೆಯಾಗಿ ಉಳಿದಿರುವುದು ಹಿರಿಯ ನಾಯಕರಿಗೆ ಕಿರುಕುಳ ನೀಡುವ ಏಕೈಕ ಅಡ್ಡದಾರಿ ಎಂದು ಆಪಾದಿಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಬ್ಬರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣ 2015 ರಲ್ಲಿ ತನಿಖಾ ಸಂಸ್ಥೆಯಿಂದ ಮುಕ್ತಾಯವಾಗಿತ್ತು. ಆದರೆ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ಇಡಿ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ