ನವದೆಹಲಿ, ಜೂ 01 (DaijiworldNews/DB): ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಾರ್ಟಿಯು ರಾಜ್ಯಗಳಿಗೆ ಉಸ್ತುವಾರಿ ನಾಯಕರನ್ನು ನೇಮಕ ಮಾಡಿದ್ದು, ರಾಜ್ಯಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿಅವರನ್ನು ನೇಮಿಸಿದೆ.
ರಾಜ್ಯ ಸಭಾ ಚುನಾವಣೆ ದಿನದಿಂದ ದಿನಕ್ಕೆ ಕಾವೇರುತ್ತಿದ್ದು, ಪ್ರಮುಖ ಮೂರು ಪಕ್ಷಗಳುರಾಜ್ಯದಲ್ಲಿ ವಿವಿಧ ಕಸರತ್ತಿನಲ್ಲಿ ತೊಡಗಿವೆ. ಬಿಜೆಪಿಯು ರಾಜ್ಯ ಸಭೆ ಚುನಾವಣೆ ನಡೆಯಲಿರುವನಾಲ್ಕು ರಾಜ್ಯಗಳಿಗೆ ಉಸ್ತುವಾರಿ ನಾಯಕರನ್ನು ನೇಮಿಸಿದೆ. ಜೂನ್ 10ರಂದು ಕರ್ನಾಟಕದಲ್ಲಿ ರಾಜ್ಯ ಸಭೆ ಚುನಾವಣೆ ನಡೆಯಲಿದೆ.
ಈ ಬಗ್ಗೆ ಬಿಜೆಪಿ ನಾಯಕ ಹಾಗೂ ವಕ್ತಾರ ಅರುಣ್ ಸಿಂಗ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಯಾವ್ಯಾವ ರಾಜ್ಯಗಳಿಗೆಯಾವ ನಾಯಕರನ್ನು ಉಸ್ತುವಾರಿಗಳನ್ನಾಗಿನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ರಾಜಸ್ಥಾನಕ್ಕೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ರಾಜ್ಯಕ್ಕೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕಕ್ಕೆ ಕೇಂದ್ರ ಸಂಸ್ಕೃತಿ ಸಚಿವ ಕಿಶನ್ ರೆಡ್ಡಿ ಮತ್ತು ಮಹಾರಾಷ್ಟ್ರಕ್ಕೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಉಸ್ತುವಾರಿ ನಾಯಕರಾಗಿ ನೇಮಕ ಮಾಡಲಾಗಿದೆ.