ನವದೆಹಲಿ, ಜೂ 01 (DaijiworldNews/DB): ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಮತ್ತು ರಾಹುಲ್ ಗಾಂಧಿಗೆ ಜಾರಿ ನಿರ್ದೇಶನಾಲಯವು ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಿದೆ.
ಜೂನ್ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಇಬ್ಬರಿಗೂ ಸಮನ್ಸ್ ಜಾರಿ ಮಾಡಲಾಗಿದೆ. ಈ ಪ್ರಕರಣ 2015 ರಲ್ಲಿ ತನಿಖಾ ಸಂಸ್ಥೆಯಿಂದ ಮುಕ್ತಾಯವಾಗಿತ್ತು. ಆದರೆ ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ಇಡಿ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ. ಇಡಿ ಸಮನ್ಸ್ ಜಾರಿಗೊಳಿಸಿರುವುದನ್ನು ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರು ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಖಚಿತಪಡಿಸಿದ್ದಾರೆ. ಮನಿ ಲಾಂಡರಿಂಗ್ ಅಥವಾ ಹಣ ವಿನಿಮಯದ ಬಗ್ಗೆ ಯಾವುದೇ ದಾಖಲೆಗಳು ಇಲ್ಲವಾದ್ದರಿಂದ ರಾಹುಲ್ ಗಾಂಧಿಯವರಿಗೆ ಕೆಲವು ವಿನಾಯಿತಿ ಕೋರಿ ತನಿಖಾ ಸಂಸ್ಥೆಗೆ ಪಕ್ಷದಿಂದ ಪತ್ರ ಬರೆಯಲಾಗುವುದು. ಸೋನಿಯಾ ಗಾಂಧಿ ಅವರು ನಿಗದಿತ ದಿನಾಂಕದಂದು ಅಗತ್ಯವಿದ್ದಲ್ಲಿ ತನಿಖೆಗೆ ಹಾಜರಾಗುತ್ತಾರೆ ಎಂದವರು ತಿಳಿಸಿದ್ದಾರೆ.
ಸೋನಿಯಾ ಮತ್ತು ರಾಹುಲ್ಗೆ ಇಡಿ ಸಮನ್ಸ್ ನೀಡಿರುವುದರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ, 1942ರಲ್ಲಿ ಆರಂಭವಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಯನ್ನು ಹತ್ತಿಕ್ಕಲು ಅಂದು ಬ್ರಿಟಿಷರು ಯತ್ನಿಸಿದಂತೆ ಇಂದು ಮೋದಿ ಸರ್ಕಾರ ಮಾಡುತ್ತಿದೆ. ಈ ಪ್ರಯತ್ನಕ್ಕಾಗಿ ಇಡಿಯನ್ನು ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.