ಪಟ್ನಾ, ಜೂ 01 (DaijiworldNews/DB): ಕಾಂಗ್ರೆಸ್ನವರು ತಾವೂ ಮುಳುಗುತ್ತಾರೆ, ಜತೆಗಿರುವವರನ್ನೂ ಮುಳುಗಿಸುತ್ತಾರೆ. ಭವಿಷ್ಯದಲ್ಲಿ ಯಾವತ್ತೂ ಕಾಂಗ್ರೆಸ್ ಜೊತೆಗೆ ಮಾತುಕತೆ ನಡೆಸುವುದಿಲ್ಲ ಎಂದು ಚುನಾವಣಾ ನೀತಿ ತಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಗಳ ಕುರಿತು ಸ್ಪಷ್ಟನೆ ನೀಡಿದ ಅವರು, ಕಾಂಗ್ರೆಸ್ ವಿಚಾರೆತ್ತಿದಾಗ ದೊಡ್ಡ ನಮಸ್ಕಾರ. ಮುಂದೆಂದೂ ಆ ಪಕ್ಷದೊಂದಿಗೆ ಯಾವುದೇ ಒಪ್ಪಂದವಾಗಲೀ, ಮಾತುಕತೆಯಾಗಲೀ ಮಾಡುವುದಿಲ್ಲ. ತಾವೂ ಮುಳುಗುವುದರೊಂದಿಗೆ, ಜತೆಗಿರುವವರನ್ನೂ ಮುಳುಗಿಸುವುದೇ ಆ ಪಕ್ಷದ ಉದ್ದೇಶ. ಆ ಪಕ್ಷ ಎಂದಿಗೂ ಒಗ್ಗಟ್ಟಾಗದು. ಕಾಂಗ್ರೆಸ್ ನ ಈಗಿನ ಮುಖ್ಯಸ್ಥರು ಕೆಳಗಿಳಿದು ಎಲ್ಲರನ್ನೂ ಕರೆದೊಯ್ಯುತ್ತಾರೆ. ನಾನು ಆ ಪಕ್ಷಕ್ಕೆ ಸೇರ್ಪಡೆಯಾದಲ್ಲಿ ನನ್ನನ್ನೂ ಅವರು ಮುಳುಗಿಸುವುದು ಖಂಡಿತಾ ಎಂದರು.
ಬಿಜೆಪಿಗೆ ಪರ್ಯಾಯವಾಗಿ ಪಕ್ಷ ರಚನೆ ಮಾಡುವ ತಯಾರಿಯಲ್ಲಿರುವ ಅವರು ಬಿಹಾರದಲ್ಲಿ ತೆರಳಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಿದರು. 2015ರಲ್ಲಿ ಬಿಹಾರ, 2017ರಲ್ಲಿ ಪಂಜಾಬ್, 2019ರಲ್ಲಿ ಆಂಧ್ರಪ್ರದೇಶ, ತಮಿಳುನಾಡು ಮತ್ತು ಬಂಗಾಳ ಎಲ್ಲಾ ಕಡೆಯೂ ನಾನು ತೊಡಗಿಸಿಕೊಂಡ ಪಕ್ಷಗಳು ಗೆಲುವು ಸಾಧಿಸಿವೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಮಾತ್ರ ಸೋಲು ಕಂಡಿದ್ದೇವೆ. ಕಾಂಗ್ರೆಸ್ನೊಂದಿಗೆ ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ನಾನು ಈಗಾಗಲೇ ನಿರ್ಧರಿಸಿದ್ದೇನೆ ಎಂದು ಪ್ರಶಾಂತ್ ಕಿಶೋರ್ ತಿಳಿಸಿದರು.