ಕೋಲ್ಕತ್ತಾ, ಜೂ 01 (DaijiworldNews/DB): ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದಾಗಲೇ ಬಾಲಿವುಡ್ ನ ಖ್ಯಾತ ಸಂಗೀತಗಾರ ಕೆಕೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.
ಕೆಕೆ ಎಂದೇ ಜನಜನಿತವಾಗಿರುವ ಕೃಷ್ಣಕುಮಾರ್ ಕುನ್ನತ್ ಅವರಿಗೆ 53 ವರ್ಷ ವಯಸ್ಸಾಗಿತ್ತು. ಕೋಲ್ಕತ್ತಾದ ನಜ್ರುಲ್ ಮಂಜ್ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಅವರು ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ತತ್ಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
1999ರಲ್ಲಿ ಕೆಕೆ ಮೊದಲ ಆಲ್ಬಂ ‘ಪಾಲ್’ ಮಾಡಿದ್ದರು. ಇದರಿಂದ ಅವರಿಗೆ ಹಲವು ಅವಕಾಶಗಳು ಒದಗಿ ಬಂದು, ಸ್ಟಾರ್ ಸಂಗೀತಗಾರನಾಗಿ ಪ್ರಸಿದ್ದಿ ಪಡೆದಿದ್ದರು. 2000ರಲ್ಲಿ ಹಿನ್ನೆಲೆ ಗಾಯನದಲ್ಲಿಅಧಿಕೃತವಾಗಿ ವೃತ್ತಿಜೀವನ ಆರಂಭಿಸಿದ್ದರು.
ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಭಾಷೆಗಳಲ್ಲಿ ಹಾಡನ್ನು ಹಾಡುತ್ತಿದ್ದ ಅವರು ತಮ್ಮ ಅದ್ಭುತ ಕಂಠದಿಂದ ಮನೆಮಾತಾಗಿದ್ದರು. ಕನ್ನಡದಲ್ಲಿ ಸಂಚಾರಿ, ಲವ್, ಮನಸಾರೆ, ಪರಿಚಯ, ಮಳೆ ಬರಲಿ ಮಂಜು ಇರಲಿ, ಬಹುಪರಾಕ್, ಯೋಗಿ, ರೌಡಿ ಅಳಿಯ, ಮದನ, ಮುಂತಾದ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಕೆಕೆ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಂಗಳೂರಿಗೆ ಬಂದಿದ್ದರು
ಕೆಕೆ ಅವರು 2016ರಸೆಪ್ಟಂಬರ್ನಲ್ಲಿ 30ರಂದು ಮಂಗಳೂರಿಗೆ ಆಗಮಿಸಿ ಕಾರ್ಯಕ್ರಮ ನೀಡಿದ್ದರು. ನಗರದ ಪಾಂಡೇಶ್ವರ ಫೋರಂ ಫಿಝಾ ಮಾಲ್ನಲ್ಲಿ ನಡೆದ "ರಾಕ್ ಲೈವ್ ವಿಥ್ ಕೆಕೆ’ ಕಾರ್ಯಕ್ರಮದಲ್ಲಿ ತಮ್ಮ ಅದ್ಭುತ ಕಂಠದಿಂದ ಮಂಗಳೂರಿನ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದರು.