ಕಲಬುರಗಿ, ಮೇ 31 (DaijiworldNews/DB): ಆಯುಷ್ಮಾನ್ ಭಾರತ ಯೋಜನೆಯಿಂದ ತನ್ನ ತಾಯಿ ಸೇರಿದಂತೆ ಹಲವರಿಗೆ ವೈದ್ಯಕೀಯವಾಗಿ ತುಂಬಾ ಪ್ರಯೋಜನವಾಗಿದೆ ಎಂದು ಕಲಬುರಗಿಯ ಮಹಿಳೆಯೊಬ್ಬರ ಮಾತಿಗೆ ಪ್ರಧಾನಿ ನರೇಂದ್ರ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕರ್ನಾಟಕದಲ್ಲಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮ ಸಂತಸದಲ್ಲಿ ಭಾಗಿಯಾಗುತ್ತಿದ್ದೆ ಎಂದಿದ್ದಾರೆ.
ವರ್ಚುವಲ್ ವೇದಿಕೆ ಮೂಲಕ ಶಿಮ್ಲಾದಲ್ಲಿ ಆಯೋಜಿಸಿದ್ದ ಗರೀಬ್ ಕಲ್ಯಾಣ್ ಸಮ್ಮೇಳನದ ಅಂಗವಾಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಿಣ್ಣಿ ಸಡಕ್ ಗ್ರಾಮದ ಸಂತೋಷಿ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ವೇಳೆ ಆಯುಷ್ಮಾನ್ ಭಾರತ ಯೋಜನೆಯಿಂದ ತಮ್ಮ ಮನೆಯವರು ಹಾಗೂ ಊರಿನವರು ಪಡೆದುಕೊಂಡ ಪ್ರಯೋಜನದ ಬಗ್ಗೆ ಮಹಿಳೆ ಸಂತೋಷಿ ಅವರು ಕನ್ನಡದಲ್ಲಿ ವಿವರಿಸಿದರು. ಅದನ್ನು ಅಧಿಕಾರಿಯೊಬ್ಬರು ಹಿಂದಿಗೆ ಭಾಷಾಂತರಿಸಿ ಪ್ರಧಾನಿಯವರಿಗೆ ವಿವರಿಸಿದರು. ಯೋಜನೆಯ ಫಲಾನುಭವಿ ಹೇಳಿದ ಮಾತಿನಿಂದ ಪ್ರಧಾನಿಯವರು ಸಂತಸ ವ್ಯಕ್ತಪಡಿಸಿದರು.
ನೀವು ಕನ್ನಡದಲ್ಲಿ ಮಾತನಾಡಿದರೂ ನಿಮ್ಮ ಮುಖದಲ್ಲಿರುವ ಸಂತಸದ ಭಾವನೆಯು ಯೋಜನೆಯ ಪ್ರಯೋಜನವನ್ನು ತೋರಿಸುತ್ತದೆ ಎಂದರು. ನೀವು ನಿಮ್ಮೂರಿನ ನಾಯಕಿಯಾಗುತ್ತೀರಾ ಎಂದು ಇದೇ ವೇಳೆ ಮೋದಿ ಸಂತೋಷಿ ಅವರನ್ನು ಪ್ರಶ್ನಿಸಿದರು.